ಕಲಬುರಗಿ: ಶರಣರ ನಾಡು ಕಲಬುರಗಿಯಲ್ಲಿ ಆಗಾಗ ಒಂದಲ್ಲ ಒಂದು ಕಾರಣಕ್ಕೆ ಗುಂಡಿನ ದಾಳಿ ಪ್ರಕರಣಗಳು ನಡೆಯುತ್ತಿದ್ದು, ರಕ್ತದ ಕೋಡಿ ಹರಿಯುತ್ತಲೇ ಇರುತ್ತದೆ. ಕಳೆದ ರಾತ್ರಿ ಮನೆ ಮುಂದೆ ನಿಂತಿದ್ದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ನಗರದ ಜೇವರ್ಗಿ ರಸ್ತೆಯಲ್ಲಿರುವ ಗೋದುತಾಯಿ ಕಾಲೋನಿಯಲ್ಲಿ ಗುಂಡು ಹಾರಿಸಿ ಗ್ರಾನೈಟ್ ಉದ್ಯಮಿ ಸುನಿಲ್ ಸೋಹನ್ಲಾಲ್ ರಾಂಕಾ (41) ಕೊಲೆ ಮಾಡಲಾಗಿದೆ.
ಸೋಹನ್ಲಾಲ್ ಜೇವರ್ಗಿ ಕ್ರಾಸ್ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಟೈಲ್ಸ್, ಸಿಮೆಂಟ್, ಪಿಒಪಿ ವ್ಯಾಪಾರ ಮಾಡಿಕೊಂಡಿದ್ದರು.
ಕಳೆದ ರಾತ್ರಿ ರಾಂಕಾ, ಮನೆ ಮುಂದೆ ನಿಂತುಕೊಂಡಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಗುಂಡೇನಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸುನಿಲ್ ರಾಂಕಾ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುಷ್ಕರ್ಮಿಗಳು ಹಾರಿಸಿದ ಗುಂಡು ನೇರವಾಗಿ ಹೃದಯ ಭಾಗಕ್ಕೆ ಹೊಕ್ಕಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಗುಂಡಿನ ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಹಾಗೂ ಪೊಲೀಸರು ಪರಿಶೀಲನೆ ನಡೆಸಿದರು.
ಸುನಿಲ್ ಸೋಹನ್ಕುಮಾರ್ ಜನರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ತಾವಾಯಿತು, ತಮ್ಮ ವ್ಯಾಪಾರ ಆಯಿತು ಎಂದುಕೊಂಡು ಜೀವನ ನಡೆಸುತ್ತಿದ್ದರು. ಹೀಗಿರುವಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಯಾಕೆ ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.









