ಜೈಪುರ: ಕಾಂಗ್ರೆಸ್ ಸರ್ಕಾರ ಪತನಕ್ಕೆ ಬಿಜೆಪಿ ಸಂಚು ನಡೆಸುತ್ತಿದೆ ಎಂದು ಆರೋಪಿಸಿ ರಾಜಸ್ಥಾನದ ರಾಜಭವನ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರು, ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯುವಂತೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ರಾಜಭವನ ಮುಂದೆ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ಪ್ರತಿಭಟನೆ ಕತ್ತಲಾದರೂ ಅಂತ್ಯಗೊಂಡಿಲ್ಲ.
ಅಧಿವೇಶನ ಕರೆಯುವಂತೆ ರಾಜ್ಯಪಾಲರು ಆದೇಶ ನೀಡುವವರೆಗೆ ರಾಜಭವನ ಮುಂದೆ ಧರಣಿ ಮುಂದುವರೆಸುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಟ್ಟು ಹಿಡಿದಿದ್ದಾರೆ. ರಾಜ್ಯಪಾಲರ ಮೇಲೆ ಕೇಂದ್ರ ಸರ್ಕಾರದಿಂದ ಒತ್ತಡ ಬರುತ್ತಿದೆ. ನಿನ್ನೆಯೇ ಅವರು ಅಧಿವೇಶನ ಕರೆಯಲು ಸೂಚಿಸಬಹುದಿತ್ತು. ಈಗಲೂ ನಾವು ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ, ಆದಷ್ಟು ಬೇಗ ಅಧಿವೇಶನ ಕರೆಯಲು ಸೂಚಿಸಬೇಕು. ರಾಜ್ಯದ ಜನರು ಆ ನಿರೀಕ್ಷೆಯಲ್ಲಿದ್ದಾರೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಲ್ಲಿನ ಪೊಲೀಸರ ಮೇಲೆ ನಂಬಿಕೆ ಹೊರಟು ಹೋಗಿದೆ. ಹೀಗಾಗಿ ಜೈಪುರ ಪಟ್ಟಣದಲ್ಲಿ ಸಿಆರ್‍ಪಿಎಫ್ ಭದ್ರತೆ ನಿಯೋಜಿಸಬೇಕು ಎಂದು ಬಿಜೆಪಿ ನಾಯಕ ಗುಲಬ್ ಚಂದ್ ಕಟಾರಿಯಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮತ್ತೆ ಸಚಿವ ಸಂಪುಟ ಸಭೆ
ಅಧಿವೇಶನ ಕರೆಯಲು ರಾಜ್ಯಪಾಲರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತೆ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಹೊಸ ಶಿಫಾರಸು ಮಾಡಲು ನಿರ್ಧರಿಸಿದ್ದಾರೆ.
ಇಕ್ಕಟ್ಟಿಗೆ ಸಿಲುಕಿದ ರಾಜ್ಯಪಾಲರು
ವಿಧಾನಮಂಡಲ ಅಧಿವೇಶನ ಕರೆಯುವಂತೆ ಸರ್ಕಾರದ ಕಡೆಯಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಇಕ್ಕಟ್ಟಿಗೆ ಸಿಲುಕಿದ್ದಾರೆ.
ರಾಜಕೀಯ ಬೆಳವಣಿಗೆ ಬಗ್ಗೆ ಪರಿಶೀಲನೆ ನಡೆಸಲು ಸಮಯ ಬೇಕು ಎನ್ನುತ್ತಿರುವ ರಾಜ್ಯಪಾಲ ಕಲ್ರಾಜ್ ಮಿಶ್ರಾ, ಅಧಿವೇಶನ ಕರೆಯಲು ಸಮ್ಮತಿ ಸೂಚಿಸಲು ತಾಂತ್ರಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರ ಮಾಡಿರುವ ಶಿಫಾರಸಿನಲ್ಲಿ ಕೇವಲ ನಾಲ್ಕು ಸಾಲುಗಳಿದ್ದು, ಅಧಿವೇಶನದ ಅಜೆಂಡಾ ವಿಚಾರಗಳೇ ಇಲ್ಲ. ಹೀಗಾಗಿ ತಕ್ಷಣ ಅಧಿವೇಶನ ಕರೆಯಲು ಒಪ್ಪಿಗೆ ನೀಡಲು ಕಷ್ಟ ಎನ್ನುತ್ತಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಪೈಲಟ್ ಬಣದ ಶಾಸಕರು.!
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಸಚಿವ ಪೈಲಟ್ ಬಣದ ಐವರು ಶಾಸಕರು ದೆಹಲಿಯಲ್ಲಿ ಇರುವ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದಾರೆ.
ನಾವು ದೆಹಲಿಯಲ್ಲೇ ಇದ್ದೇವೆ, ನಾವು ಎಲ್ಲೂ ತಲೆಮರೆಸಿಕೊಂಡಿಲ್ಲ. ನಮ್ಮನ್ನು ಸರ್ಕಾರ ಹುಡುಕುವ ಪ್ರಯತ್ನ ಮಾಡುವ ಅಗತ್ಯವಿಲ್ಲ ಎಂದು ಥೇಟ್ ಕರ್ನಾಟಕದ ಬಂಡಾಯ ಶಾಸಕರು ಮುಂಬೈನಲ್ಲಿದ್ದುಕೊಂಡೇ ಅನುಸರಿಸಿದ ದಾರಿಯನ್ನೇ ಹಿಡಿದಿದ್ದಾರೆ.








