ಕರಾವಳಿ ರೈತರ ಕೈಹಿಡಿದ ಅಡಿಕೆ ಬೆಳೆ
ಮಂಗಳೂರು, ಜೂನ್ 18: ಕರಾವಳಿಯ ಭಾಗದ ಕೃಷಿಕರಲ್ಲಿ ಅನೇಕ ವರ್ಷಗಳ ನಂತರ ಪ್ರಮುಖ ಬೆಳೆ ಅಡಿಕೆಯ ಬೆಲೆ ಏರಿಕೆ ತಕ್ಕ ಮಟ್ಟಿಗೆ ಖುಷಿ ತಂದಿದೆ. ಈಗಾಗಲೇ ಕೊರೊನಾ ಹೆಮ್ಮಾರಿಗೆ ಹೈರಾಣಾದ ಕೃಷಿಕರ ಬದುಕು ಸದ್ಯ ಅಡಿಕೆ ಬೆಲೆ ಏರಿಕೆಯಿಂದ ಮುಖದಲ್ಲಿ ಮಂದಹಾಸ ಚೆಲ್ಲಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಜೀವ ಬೆಳೆ ಅಡಿಕೆ ಕರಾವಳಿಗರ ಪಾಲಿಗೆ ವರದಾನವಾಗಿದ್ದು ದಾಸ್ತಾನು ಕೊರತೆ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಸುಮಾರು ಹದಿನೈದು ವರ್ಷಗಳ ನಂತರ ಅಡಿಕೆ ಬೆಲೆ ಏರಿಕೆ ಕಂಡಿದೆ. ಈ ವರ್ಷದ ಆರಂಭದಲ್ಲಿ ಪ್ರತಿ ಕ್ವಿಂಟಲ್ ಗೆ ರೂ 23000 -24000 ಆಸುಪಾಸಿನಲ್ಲಿದ್ದ ಅಡಿಕೆ ದರ ರೂ 27000 ರ ಗಡಿ ದಾಟಿದೆ. ಮಾರ್ಚ್ ತಿಂಗಳಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆದಾಗ ಅಡಿಕೆ ಬೆಳೆಗಾರರ ನಿದ್ದೆ ಗೆಡಿಸಿದಂತು ಸುಳ್ಳಲ್ಲ. ಆದರೆ ಕ್ಯಾಂಪ್ಕೊ ಅಡಿಕೆ ಬೆಳೆಗಾರ ಆಪತ್ತಿಗೆ ಧಾವಿಸಿ ಅಡಿಕೆ ಬೆಲೆಯನ್ನು ಕ್ವಿಂಟಲ್ ಗೆ 25,000 ರ ಆಸುಪಾಸಿನಲ್ಲಿ ವ್ಯವಹಾರ ನಡೆಸಿತ್ತು. ಆದರೆ ರಾಜ್ಯದ ಲಾಕ್ ಡೌನ್ ಸಡಿಲಿಕೆಯಿಂದ ಇತರ ಖಾಸಗಿ ವ್ಯಾಪಾರಸ್ಥರಿಗೂ ವ್ಯವಹಾರ ನಡೆಸಲು ಅನುಮತಿ ನೀಡಲಾಯಿತು. ಇದರ ಮದ್ಯ ಕ್ಯಾಂಪ್ಕೊ ಅಡಿಕೆ ದಾಸ್ತಾನಿನ ಕೊರತೆಯನ್ನು ರೈತರಿಗೆ ತಿಳಿಪಡಿಸಿ ಆತಂಕವನ್ನು ದೂರಮಾಡಿದ್ದಾರೆ. ಕಳೆದ ವಾರದ ಹಿಂದೆ ರೂ 31,500 ದಲ್ಲಿ ಇದ್ದ ಅಡಿಕೆ ಬೆಲೆ ಏಕಾಏಕಿ ರೂ 29,000 ಕ್ಕೆ ಇಳಿದಾಗ ರೈತರು ಕಾದು ನೋಡುವ ತಂತ್ರ ಅನುಸರಿಸಿದರು. ಇದೀಗ ಅಡಿಕೆಗೆ ಬೇಡಿಕೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗದ ಕಾರಣ ಅಡಿಕೆ ಬೆಲೆ ಮುಂದಿನ ದಿನಗಳಲ್ಲಿ ರೂ 35,000 ದಿಂದ ರೂ 40,000 ತಲುಪಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಕಳೆದ ಹಲವು ವರ್ಷಗಳಿಂದ ಬೇರು ಹುಳದ ಕಾಟ, ಕೊಳೆರೋಗ, ಅತಿ ವೃಷ್ಟಿ , ಅನಾವೃಷ್ಟಿ , ಅಕಾಲಿಕ, ಅನಿಯಮಿತ ಮಳೆಯಿಂದ ರೈತರು ಅನುಭವಿಸಿದ ನಷ್ಟಕ್ಕೆ ಇದೀಗ ಬೆಲೆ ಏರಿಕೆ ಸ್ವಲ್ಪ ಮಟ್ಟಿನ ಭರವಸೆಯನ್ನು ನೀಡಿದೆ. ಕೊರೊನ ರೋಗದಿಂದ ಹೆಚ್ಚಿನ ಜನ ಯಾವುದೇ ರೀತಿಯ ಕಾರ್ಯಕ್ರಮ ನಡೆಸದೇ ಇರುವ ಕಾರಣ ಅಡಿಕೆ ಮಾರುವ ಪ್ರಮೇಯ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ದರ ಯಾವ ರೀತಿ ತನ್ನ ಏರಿಕೆಯನ್ನು ನಿಭಾಯಿಸುತ್ತದೆ ಅನ್ನುವುದನ್ನು ಕಾದುನೋಡಬೇಕಿದೆ.