ಅಮೆರಿಕದಲ್ಲಿ ಕೊರೊನಾ ಸಂಕಷ್ಟದ ಜೊತೆಗೆ ಏರಿಕೆ ಕಂಡಿರುವ ಉದ್ಯೋಗ ನಷ್ಟ
ವಾಷಿಂಗ್ಟನ್, ಜೂನ್ 28: ಕೊರೊನಾ ಸೋಂಕು ಹೆಚ್ಚಳದ ನಡುವೆ ಅಮೆರಿಕದಲ್ಲಿ ಉದ್ಯೋಗ ನಷ್ಟ ಪ್ರಮಾಣವು ಏರಿಕೆಯಾಗಿರುವುದು ಅಮೆರಿಕ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಕಳೆದ ವಾರ 14 ಲಕ್ಷದಷ್ಟಾಗಿದ್ದ ಉದ್ಯೋಗ ನಷ್ಟ ಪ್ರಮಾಣವು ಈ ವಾರ 15 ಲಕ್ಷಕ್ಕೆ ಏರಿದೆ. ಲಾಕ್ ಡೌನ್ ಕಾರಣದಿಂದ ಕುಸಿತ ಕಂಡಿದ್ದ ಅರ್ಥಿಕತೆಯ ಚೇತರಿಕೆಗೆ ಲಾಕ್ ಡೌನ್ ಸಡಿಲಿಕೆಯ ಬಳಿಕ ಸರ್ಕಾರ ಬಹಳಷ್ಟು ಪ್ರಯತ್ನಿಸುತ್ತಿದ್ದರೂ ಉದ್ಯೋಗ ನಷ್ಟ ಪ್ರಮಾಣವು ಮುಂದುವರಿದಿದೆ. ಜೂನ್ 20ರ ವೇಳೆಗೆ ನಿರುದ್ಯೋಗ ಭತ್ತೆಗೆ ಅರ್ಜಿ ಹಾಕಿದವರ ಪ್ರಮಾಣವು ಏರಿಕೆಯಾಗಿದ್ದು, ಸುಮಾರು 14 ಲಕ್ಷದಷ್ಟು ಮಂದಿ ಹೊಸದಾಗಿ ಭತ್ತೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಸುಮಾರು 47 ಲಕ್ಷ ಪ್ರಮಾಣದ ಉದ್ಯೋಗ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದ್ದು, ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದ್ದರೂ ಕೊರೊನಾ ಸೋಂಕು ಪ್ರಮಾಣ ಅಮೆರಿಕದಲ್ಲಿ ತೀವ್ರವಾಗಿ ಏರಿಕೆಯಾಗಿರುವ ಕಾರಣ ಆರ್ಥಿಕ ಚಟುವಟಿಕೆಗಳು ಇನ್ನೂ ಚೇತರಿಕೆ ಕಂಡಿಲ್ಲ.
ಇದೇ ವೇಳೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಅಮೆರಿಕದ ಅರ್ಥಿಕ ಹಿಂಜರಿತದಿಂದಾಗಿ ಇಡೀ ವಿಶ್ವದ ಜಿಡಿಪಿ ಶೇ.4.9ರಷ್ಟಕ್ಕೆ ಕುಸಿಯಬಹುದು ಎಂದು ಅಭಿಪ್ರಾಯ ಪಟ್ಟಿದೆ.








