ಹೊಸದಿಲ್ಲಿ, ಜೂನ್ 5 : ಕೇಂದ್ರ ಆರೋಗ್ಯ ಸಚಿವಾಲಯ ಇಎನ್‌ಟಿ ಶಸ್ತ್ರಚಿಕಿತ್ಸಾ ವಿಧಾನಗಳಿಂದ ಕೊರೊನಾ ಸೋಂಕು ಹರಡುವ ಅಪಾಯ ಬಹಳಷ್ಟು ಹೆಚ್ಚಿದ್ದು, ಕೊರೊನಾ ಸೋಂಕಿತ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಕೊರೊನಾ ರೋಗಿಗಳಿಗೆಂದೇ ಪ್ರತ್ಯೇಕವಾಗಿ ಗೊತ್ತುಪಡಿಸಿರುವ ಆಪರೇಷನ್ ಥಿಯೇಟರ್ ಗಳಲ್ಲಿ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಹೇಳಿದೆ.
ಇಂತಹ ಸಮಯದಲ್ಲಿ ಶಸ್ತ್ರಚಿಕಿತ್ಸೆಯನ್ನು 14 ದಿನಗಳವರೆಗೆ ಮುಂದೂಡಬಹುದಾದರೆ ಮುಂದೂಡಿ, ಇಲ್ಲವಾದರೆ ಪ್ರತ್ಯೇಕವಾಗಿ ಕೊರೊನಾ ರೋಗಿಗಳಿಗೆಂದು ಗೊತ್ತುಪಡಿಸಿದ ಆಪರೇಷನ್ ಥಿಯೇಟರ್‌ನಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ.
ಕಿವಿ, ಮೂಗು, ಗಂಟಲು (ಇಎನ್‌ಟಿ) ಚಿಕಿತ್ಸೆ ನೀಡುವ ವೈದ್ಯಕೀಯ ವಲಯದವರಿಗೆ ಕೊರೊನ ಸೋಂಕು ಹರಡುವ ಅಪಾಯ ಹೆಚ್ಚಿರುವುದರಿಂದ ಇಎನ್‌ಟಿ ವೈದ್ಯರು, ಶುಶ್ರೂಷಾ ಸಿಬ್ಬಂದಿ, ಸಹಾಯಕ ಸಿಬ್ಬಂದಿ, ರೋಗಿಗಳಿಗೆ ಕೊರೊನಾ ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಆರೋಗ್ಯ ಸಚಿವಾಲಯ ಹೊಂದಿದೆ.
ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಮೊದಲು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು. ಕೊರೋನಾ ಶಂಕಿತರು ಅಥವಾ ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.








