2025 ಭಾರತ – ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ – ನೋ ಹ್ಯಾಂಡ್ ಶೇಕ್..!
2025 ಭಾರತ – ಪಾಕ್ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ – ನೋ ಹ್ಯಾಂಡ್ ಶೇಕ್..!
2025 ಭಾರತ – ಪಾಕ್ ನಡುವಿನ 19 ವಯೋಮಿತಿ ಏಕದಿನ ಏಷ್ಯಾಕಪ್ ಟೂರ್ನಿ – ನೋ ಹ್ಯಾಂಡ್ ಶೇಕ್…!
ಇದು ಎಷ್ಟು ದಿನ ಹೀಗೆ ಮುಂದುವರಿಯುತ್ತೆ.. ಗೊತ್ತಿಲ್ಲ… ಉಭಯ ದೇಶಗಳ ನಡುವಿನ ರಾಜಕೀಯ ಕದನಕ್ಕೆ ಮೈದಾನದಲ್ಲಿ ಇಂಡೋ ಪಾಕ್ ಆಟಗಾರರು ಒಬ್ಬರೊನ್ನೊಬ್ಬರು ದಿಟ್ಟಿಸಿ ಕೂಡ ನೋಡುತ್ತಿಲ್ಲ. ಆಟಗಾರರ ನಡುವೆ ಮಾತಿಲ್ಲ.. ಮುಖದಲ್ಲಿ ನಗುವಿಲ್ಲ. ಎಲ್ಲವೂ ಪೂರ್ವ ನಿರ್ಧಾರದಂತೆ ನಡೆದಿದೆ. ಮೈದಾನದಲ್ಲಿ ಮುಜುಗರವಾಗಬಾರದು ಎಂಬ ಕಾರಣಕ್ಕೆ ಐಸಿಸಿ ಮೊದಲೇ ಸೂಚನೆ ನೀಡಿತ್ತು. ಹ್ಯಾಂಡ್ ಶೇಕ್ ಮಾಡುತ್ತಿಲ್ಲ ಎಂಬುದನ್ನು ಮೊದಲೇ ಹೇಳಬೇಕು ಎಂದು ಹೇಳಿತ್ತು. ಹಾಗೇ ಕ್ರಿಕೆಟ್ ಆಟದಲ್ಲಿ ರಾಜಕೀಯ ಬೇಡ ಎಂಬ ಸಂದೇಶವನ್ನು ಬಿಸಿಸಿಐ ತಿರಸ್ಕರಿಸಿದೆ. ಹೀಗಾಗಿ ಹ್ಯಾಂಡ್‍ಶೇಕ್ ವಿಚಾರ ಮುಂದಿನ ದಿನಗಳಲ್ಲಿ ಐಸಿಸಿಗೆ ಧರ್ಮ ಸಂಕಟವಾಗಿ ಪರಿಣಮಿಸಲಿದೆ.
ಇಂಡೋ ಪಾಕ್ ಮ್ಯಾಚ್ ಅಂದ್ರೆ ಅದು ಹೈವೋಲ್ಟೇಜ್ ಪವರ್ ಇದ್ದಂಗೆ. ನಿಜ, ಉಭಯ ದೇಶಗಳ ನಡುವೆ ಈ ಹಿಂದೆ ಮೈದಾನದಲ್ಲಿ ಸಾಕಷ್ಟು ವಾಕ್ಸಮರಗಳು ನಡೆದಿವೆ. ಆಟಗಾರರು ಕಿತ್ತಾಡಿಕೊಂಡಿದ್ದಾರೆ. ಹೊಡೆದಾಟಕ್ಕೂ ಮುಂದಾಗಿದ್ದಾರೆ. ಹಾಗೇ ಮೈದಾನದ ಹೊರಗಡೆಯೂ ಅಭಿಮಾನಿಗಳ ನಡುವೆ ಅಷ್ಟೇ ಕಿತ್ತಾಟಗಳು ನಡೆದಿವೆ. ಆದ್ರೆ ಪಂದ್ಯ ಮುಗಿದ ಮೇಲೆ ಉಭಯ ದೇಶಗಳ ನಡುವಿನ ಆಟಗಾರರ ನಡುವೆ ಆತ್ಮೀಯತೆ ಇರುತ್ತಿತ್ತು. ಭಾರತದ ವಿರುದ್ಧ ಸದಾ ಟೀಕೆ ಮಾಡುತ್ತಿರುವ ಶಾಹೀದ್ ಆಫ್ರಿದಿ 2004ರಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಮನೆಗೆ ಕರೆದು ಆತಿಥ್ಯ ನೀಡಿದ್ದರು ಎಂಬುದನ್ನು ಮರೆಯುವ ಹಾಗಿಲ್ಲ. ಅಲ್ಲದೆ, 2004ರ ಸೌಹಾರ್ದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಉಭಯ ದೇಶಗಳು ದ್ವೇಷವನ್ನು ಮರೆತು ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿದ್ರು.
ಆದ್ರೆ ಪಾಕ್‍ನ ರಾಜಕೀಯ ನಾಯಕರ ಅಧಿಕಾರ ದಾಹ.. ಸೇನೆಯ ಕಪಟ ನಾಟಕ..ನರಹಂತಕ ರಕ್ಕಸರ ಆರ್ಭಟಕ್ಕೆ ಇಂಡೋ ಪಾಕ್ ನಡುವಿನ ರಾಜಕೀಯ, ಆರ್ಥಿಕ ವಹಿವಾಟು ಮಾತ್ರ ಸ್ಥಗಿತಗೊಂಡಿಲ್ಲ. ಜೊತೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಮ್ಯಾಚ್ ನಿಂತೋಗಿದೆ. ಇದೀಗ ಐಸಿಸಿ ಟೂರ್ನಿಗಳನ್ನು ತಟಸ್ಥ ತಾಣಗಳಲ್ಲಿ ಆಡುತ್ತಿದ್ದು, ಮುಂದೊಂದು ದಿನ ಇದು ಕೂಡ ಸ್ಥಗಿತಗೊಂಡ್ರೆ ಅಚ್ಚರಿ ಏನಿಲ್ಲ..!
ಯಾಕಂದ್ರೆ ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿ ಪಾಕ್ ಜೊತೆ ನೆಂಟಸ್ತಿಕೆ ಮಾಡೋ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಮೋದಿ ಅವರು, ಅಟಲ್‍ಬಿಹಾರಿ ವಾಜಪೇಯಿಯಂತೆ ಸ್ನೇಹಜೀವಿಯೂ ಅಲ್ಲ.. ಮನಮೋಹನ್ ಸಿಂಗ್‍ನಂತೆ ಉದಾರವಾದಿಯೂ ಅಲ್ಲ.. ಏನಿದ್ರೂ ಭಯೋತ್ಪಾದನೆ ನಿಲ್ಲೋ ತನಕ ಪಾಕಿಸ್ತಾನದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಅಷ್ಟೇ ಅಲ್ಲ.. ಕ್ರಿಕೆಟ್‍ನಿಂದ ಭಾರತ – ಪಾಕ್ ನಡುವೆ ಸ್ನೇಹ ಬೆಳೆಯುತ್ತೆ ಎಂಬುದು ಪೇಪರ್ ಮೇಲೆ ಬರೆಯುವ ಪದಗಳಷ್ಟೇ ಎಂಬುದು ಗೊತ್ತಿರುವ ವಿಚಾರವೇ..! ಈ ಹಿಂದೆ ಎರಡು ಮೂರು ಬಾರಿ ಸ್ನೇಹ ಹಸ್ತಚಾಚಿದ್ರೂ ಭಾರತದ ಬೆನ್ನಿಗೆ ಚೂರಿ ಹಾಕಿರುವ ಪಾಕಿಸ್ತಾನದ ನರಿಬುದ್ದಿಯನ್ನು ಈಗ ಅಷ್ಟು ಇಝಿಯಾಗಿ ನಂಬುವ ಸ್ಥಿತಿಯಲ್ಲಿ ಇಲ್ವೇ ಇಲ್ಲ.. ಸೋ.. ಸದ್ಯ ನೋ ಹ್ಯಾಂಡ್‍ಶೇಕ್.. ಮುಂದೊಂದು ದಿನ ನೋ ಕ್ರಿಕೆಟ್ ಮ್ಯಾಚ್..?
ಸನತ್ ರೈ








