ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ವಿಕೆಟ್ಗಳನ್ನ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ, 5 ಓವರ್ಗಳಲ್ಲಿ 18 ರನ್ ನೀಡಿ 5 ವಿಕೆಟ್ಗಳನ್ನ ಪಡೆಯುವ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು. ಈ ಪ್ರದರ್ಶನದ ಮೂಲಕ ಪ್ರಸಕ್ತ ವಿಶ್ವಕಪ್ನಲ್ಲಿ 2ನೇ ಬಾರಿಗೆ 5 ವಿಕೆಟ್ ಪಡೆದು ಮಿಂಚಿದ ಶಮಿ, ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಡೆದರು.
ಈ ಪ್ರದರ್ಶನದೊಂದಿಗೆ ಏಕದಿನ ವಿಶ್ವಕಪ್ನಲ್ಲಿ 45* ವಿಕೆಟ್ಗಳನ್ನ ಪಡೆದು ಮಿಂಚಿದರೆ. ಭಾರತದ ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್(44 ವಿಕೆಟ್) ಹಾಗೂ ಜಹೀರ್ ಖಾನ್(44 ವಿಕೆಟ್) ಅವರುಗಳ ಜಂಟಿ ದಾಖಲೆಯನ್ನ ಹಿಂದಿಕ್ಕಿದರು. ಅಲ್ಲದೇ ಕೇವಲ 14 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೂ ಮೊಹಮ್ಮದ್ ಶಮಿ ಭಾಜನರಾದರು. ಜಹೀರ್ ಖಾನ್ 23 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಜಾವಗಲ್ ಶ್ರೀನಾಥ್ 34 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
3 ಪಂದ್ಯ, 14 ವಿಕೆಟ್ಗಳು:
ಪ್ರಸಕ್ತ ವಿಶ್ವಕಪ್ನ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ತಂಡದಲ್ಲಿ ಆಡುವ ಅವಕಾಶ ಸಿಗದೆ ಬೆಂಚ್ ಕಾದಿದ್ದ ಮೊಹಮ್ಮದ್ ಶಮಿ, ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಅವಕಾಶವನ್ನ ಸೂಕ್ತ ರೀತಿಯಲ್ಲಿ ಬಳಸಿಕೊಂಡ ಶಮಿ, ಕಿವೀಸ್ ವಿರುದ್ಧ 5/54 ವಿಕೆಟ್ ಪಡೆದು ಮಿಂಚಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧ 4/22 ವಿಕೆಟ್ ಪಡೆದು ಅಬ್ಬರಿಸಿದ್ದರು. ಇದೀಗ ಶ್ರೀಲಂಕಾ ವಿರುದ್ಧ 5/18 ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 14 ವಿಕೆಟ್ಗಳನ್ನ ಪಡೆದಿದ್ದಾರೆ.
IND v SL, Team India, Sri Lanka, Mohammad Shami, ODI Cricket