T20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಮೊದಲು ಸೂಚನೆ ನೀಡಿದ್ದ ಪಾಕಿಸ್ತಾನ ಇದೀಗ ಅಚ್ಚರಿಯ U-ಟರ್ನ್ ತೆಗೆದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಪಾಕಿಸ್ತಾನ ತಂಡ ಭಾರತ ವಿರುದ್ಧ ಆಡುವುದಾಗಿ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ, ಪಂದ್ಯ ನಡೆಯಲಿರುವ ಶ್ರೀಲಂಕಾದ ಕೊಲಂಬೊ ನಗರಕ್ಕೆ ವಿಮಾನ ಟಿಕೆಟ್ ದರಗಳು ಏಕಾಏಕಿ ಗಗನಕ್ಕೇರಿವೆ.
ಪಾಕಿಸ್ತಾನದ ಈ ಘೋಷಣೆಯ ಬಳಿಕ, ಕೊಲಂಬೊಗೆ ತೆರಳುವ ವಿಮಾನ ಟಿಕೆಟ್ ದರಗಳು ಸರಾಸರಿ ₹10,000 ರಷ್ಟು ಹೆಚ್ಚಾಗಿವೆ. ಪ್ರಸ್ತುತ ರೌಂಡ್ ಟ್ರಿಪ್ ವಿಮಾನ ಟಿಕೆಟ್ ದರವು ಸುಮಾರು ₹60,000ಕ್ಕೆ ತಲುಪಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಹೊರೆ ತಂದಿದೆ.
ಇನ್ನು ಪಂದ್ಯಕ್ಕೆ ಕೇವಲ ಇನ್ನೂ 5 ದಿನಗಳು ಮಾತ್ರ ಬಾಕಿ ಇರುವುದರಿಂದ, ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ವಿಮಾನ ಟಿಕೆಟ್ ದರಗಳು ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಪ್ರವಾಸ ಏಜೆಂಟ್ಗಳು ಅಂದಾಜು ವ್ಯಕ್ತಪಡಿಸಿದ್ದಾರೆ.
ಭಾರತ–ಪಾಕಿಸ್ತಾನ ಪಂದ್ಯ ಎಂದರೆ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಭಾರೀ ಕುತೂಹಲ ಇರುವುದರಿಂದ, ಈ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕೊಲಂಬೊಗೆ ಪ್ರಯಾಣಿಸಲು ಸಜ್ಜಾಗಿದ್ದಾರೆ. ಇದೇ ಕಾರಣದಿಂದ ವಿಮಾನ ಮತ್ತು ಹೋಟೆಲ್ ದರಗಳು ಸಹ ಅಸಾಧಾರಣವಾಗಿ ಏರಿಕೆಯಾಗುತ್ತಿವೆ.
ಒಟ್ಟಾರೆ, IND–PAK ಹೈವೋಲ್ಟೇಜ್ ಪಂದ್ಯ ಕ್ರಿಕೆಟ್ ಮಾತ್ರವಲ್ಲ, ಪ್ರವಾಸ ಮಾರುಕಟ್ಟೆಯನ್ನೂ ಕಾದು ಕೆಂಪಾಗಿಸಿದೆ.








