IND vs SL 1st T20I : ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಮಾವಿ
ಯುವ ವೇಗದ ಬೌಲರ್ ಶಿವಂ ಮಾವಿ(4/22) ಅವರ ಚಾಣಾಕ್ಷ ಬೌಲಿಂಗ್ ಹಾಗೂ ದೀಪಕ್ ಹೂಡ(41*) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಶ್ರೀಲಂಕಾ ವಿರುದ್ದದ ಮೊದಲ T20I ಪಂದ್ಯದಲ್ಲಿ ಟೀಂ ಇಂಡಿಯಾ 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಭಾರತ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ನಡುವೆಯೂ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್‌ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ ದಸುನ್ ಶನಕ(46) ಹಾಗೂ ಚಮಿಕ ಕರುಣಾರತ್ನೆ(23*) ವ್ಯರ್ಥ ಹೋರಾಟದ ನಡುವೆಯೂ 20 ಓವರ್‌ಗಳಲ್ಲಿ 160/10 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಅಕ್ರ ಕ್ರಮಾಂಕದ ವೈಫಲ್ಯ
ಮೊದಲು ಬ್ಯಾಟ್ ಮಾಡಿದ ಭಾರತ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್(7) ರನ್‌ಗಳಿಸಿ ಚೊಚ್ಚಲ ಪಂದ್ಯದಲ್ಲಿ ನಿರಾಸೆ ಮೂಡಿಸಿದರೆ. ನಂತರದಲ್ಲಿ ಕಣಕ್ಕಿಳಿದ ಸೂರ್ಯ ಕುಮಾರ್ ಯಾದವ್(7) ಹಾಗೂ ಸಂಜೂ ಸ್ಯಾಮ್ಸನ್(5) ರನ್‌ಗಳಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಪರಿಣಾಮ ಭಾರತ 46 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಸರೆಯಾದ ಹೂಡ-ಅಕ್ಸರ್
ಒಂದೆಡೆ ವಿಕೆಟ್ ಬೀಳುತ್ತಿದ್ದರು ತಮ್ಮ ಅಸಲಿ ಆಟವಾಡಿದ ಇಶಾನ್ ಕಿಶನ್(37) ಉಪಯುಕ್ತ ರನ್‌ಗಳಿಸಿ ಹೊರ ನಡೆದರೆ. ನಾಯಕ ಹಾರ್ದಿಕ್ ಪಾಂಡ್ಯ(29) ಸಹ ಜವಾಬ್ದಾರಿಯುತ ರನ್‌ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ದೀಪಕ್ ಹೂಡ(41* ರನ್, 23 ಬಾಲ್, 1 ಬೌಂಡರಿ, 4 ಸಿಕ್ಸ್) ಹಾಗೂ ಅಕ್ಸರ್ ಪಟೇಲ್(31* ರನ್, 20 ಬಾಲ್, 3 ಬೌಂಡರಿ, 1 ಸಿಕ್ಸ್) ಮೂಲಕ ಆಸರೆಯಾದರು. ಈ ಇಬ್ಬರು 6ನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ 162ಕ್ಕೆ ಏರಿಸಿದರು.
ಶನಕ-ಕರುಣಾರತ್ನೆ ವ್ಯರ್ಥ ಆಟ
ಚೇಸಿಂಗ್ ಆರಂಭಿಸಿದ ಶ್ರೀಲಂಕಾ ಸಹ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ(1) ರನ್‌ಗಳಿಸಿ ಔಟಾದರೆ. ನಂತರ ಬಂದ ಧನಂಜಯ ಡಿಸಿಲ್ವಾ(8), ಚರಿತ್ ಅಸಲಂಕ(12) ಹಾಗೂ ರಾಜಪಕ್ಸೆ(10) ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ದಸುನ್ ಶನಕ(45 ರನ್, 27 ಬಾಲ್, 3 ಬೌಂಡರಿ, 3 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. ನಂತರ ಜೊತೆಯಾದ ಹಸರಂಗ(21) ಬಿರುಸಿನ ರನ್‌ಗಳಿಸಿ ನಿರ್ಗಮಿಸಿದರು. ಆದರೆ ಚಮಿಕ ಕರುಣಾರತ್ನೆ(23*) ರನ್‌ಗಳಿಸಿ ಕೊನೆಯ ಓವರ್‌ವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು ತಂಡಕ್ಕೆ ಗೆಲುವು ಸಿಗಲಿಲ್ಲ. ಕೊನೆಯ ಓವರ್‌ನಲ್ಲಿ ಶ್ರೀಲಂಕಾ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ಮಾಡಿದ ಅಕ್ಸರ್ ಪಟೇಲ್ ಕೇವಲ 10 ರನ್ ನೀಡುವ ಮೂಲಕ 2 ರನ್‌ಗಳ ಗೆಲುವು ತಂದುಕೊಟ್ಟರು.
ಮಾವಿ ಬೊಂಬಾಟ್ ಬೌಲಿಂಗ್
ಭಾರತ ನೀಡಿದ 163 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಶಿವಂ ಮಾವಿ(4/22) ಕಡಿವಾಣ ಹಾಕಿದರು. ತಮ್ಮ ಮೊದಲ ಓವರ್‌ನಿಂದಲೇ ಪರಿಣಾಮಕಾರಿ ಬೌಲಿಂಗ್ ಮಾಡಿದ ಮಾವಿ, ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಉಮ್ರಾನ್ ಮಲ್ಲಿಕ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯ ಬ್ಯಾಟಿಂಗ್‌ನಿಂದ ಭಾರತಕ್ಕೆ ಆಸರೆಯಾದ ದೀಪಕ್ ಹೂಡ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಜ.5ರಂದು ಪುಣೆಯಲ್ಲಿ ನಡೆಯಲಿದೆ.








