Ind Vs Wi ಸರಣಿಗೆ ಯಾರು ಇನ್..? ಯಾರು ಔಟ್..?
ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯ ಸೋಲು ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ಸರಣಿಯಲ್ಲಿ ವೈಫಲ್ಯವಾದ ಆಟಗಾರರಿಗೆ ಕೋಕ್ ನೀಡಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಯುವ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳಿಗೆ ದೂರ ಇದ್ದ ರೋಹಿತ್ ಶರ್ಮಾ ಇದೀಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ರೀ ಎಂಟ್ರಿ..?
ಬ್ಯಾಡ್ ಪಾರ್ಮ್ ಮತ್ತು ಫಿಟ್ ನೆಸ್ ಸಮಸ್ಯೆಗಳಿಂದ ಟೀಂ ಇಂಡಿಯಾದಿಂದ ದೂರ ಇರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಸರಣಿಗೆ ಪುನರಾಗಮನವಾಗುವ ಸಾಧ್ಯತೆಗಳಿವೆ. ಹಾರ್ದಿಕ್ ಈಗಾಗಲೇ ನೆಟ್ಸ್ ಗಳಲ್ಲಿ ಬೆವರಿಳಿಸುತ್ತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾದಲ್ಲಿನ ಆಲ್ ರೌಂಡರ್ ಸ್ಥಾನಕ್ಕೆ ಈಗ ಭಾರಿ ಪೈಪೋಟಿ ಶುರುವಾಗಿದೆ. ಶರ್ದೂಲ್ ಠಾಕೂರ್, ದೀಪಕ್ ಚಹಾರ್ ರೇಸ್ ನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಈ ಇಬ್ಬರೂ ಅಬ್ಬರಿಸಿದ್ದರು. ಶರ್ದೂಲ್ ಒಂದು ಮತ್ತು ಎರಡನೇ ಪಂದ್ಯದಲ್ಲಿ ಮಿಂಚಿದ್ರೆ, ದೀಪಕ್ ಚಹಾರ್, ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ಇದಲ್ಲದೇ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ದೀಪಕ್ ಚಹಾರ್, ಮತ್ತು ಶರ್ದೂಲ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಅಲ್ಲದೇ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು ಎಂದು ವಾದಿಸಿದ್ದಾರೆ, ಹೀಗಾಗಿ ವೆಸ್ಟ್ ಇಂಡಿಸ್ ವಿರುದ್ಧದ ಸರಣಿಗೆ ಹಾರ್ದಿಕ್ ಆಯ್ಕೆ ಆಗುತ್ತಾರಾ ಅನ್ನೋದು ಅನುಮಾನವಾಗಿದೆ.
ಇನ್ನು ಜಸ್ಪ್ರೀತ್ ಬುಮ್ರಾ, ಶಮಿಗೆ ಈ ಸರಣಿಯಲ್ಲಿ ರೆಸ್ಟ್ ನೀಡುವ ಸಾಧ್ಯತೆಗಳಿವೆ. ಹಾಗೇ ವಿರಾಟ್ ಕೊಹ್ಲಿಗೂ ರೆಸ್ಟ್ ನೀಡಬಹುದು ಎಂದು ಹೇಳಲಾಗುತ್ತಿದೆ. ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಗೆ ಚಾನ್ಸ್ ನೀಡಬಹುದು.








