ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್‍ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ ಕಾರಣ ಈ ಮೂವರು ತ್ರಿಮೂರ್ತಿಗಳು.
ಎನ್.ಪಿ.ಕೆ. ಸಾಳ್ವೆ.. ಜಗನ್ ಮೋಹನ್ ದಾಲ್ಮಿಯಾ.. ಇಂದರ್‍ಜಿತ್ ಸಿಂಗ್ ಬಿಂದ್ರಾ..!
ವಾಹ್ಹ್.. ಎಂಥಾ ದೂರದೃಷ್ಟಿಯ ಕ್ರಿಕೆಟ್ ಆಡಳಿತಗಾರರು..! ಭಾರತೀಯ ಕ್ರಿಕೆಟಿಗರನ್ನು ಅಭಿಮಾನಿಗಳು ಹೃದಯದಿಂದ ಪ್ರೀತಿಸುವಂತೆ ಮಾಡಿದ್ದು ಇವ್ರ ಕ್ರಿಕೆಟ್ ಪ್ರೇಮ..! ಭಾರತದಲ್ಲಿ ವಿಶ್ವ ದರ್ಜೆಯ ಕ್ರಿಕೆಟ್ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡುವಂತೆ ಮಾಡಿದ್ದು ಇವ್ರ ಛಲ…! ಕ್ರಿಕೆಟಿಗರ ಜೇಬಿಗೆ ಕೋಟಿ ಕೋಟಿ ಹಣ ಸೇರುವಂತೆ ಮಾಡಿದ್ದು ಇವ್ರ ಅಲೋಚನೆ..! ಕ್ರೀಡಾ ಸಂಸ್ಥೆಗೆ ವೃತ್ತಿಪರತೆಯನ್ನು ತಂದುಕೊಟ್ಟಿದ್ದು ಇವ್ರ ದೂರದೃಷ್ಠಿ..! ಕ್ರಿಕೆಟ್ ಜಗತ್ತನ್ನು ಆಳುತ್ತಿದ್ದ ಬ್ರಿಟಿಷರ ಗರ್ವಭಂಗ ಮಾಡಿದ್ದು ಕೂಡ ಇವ್ರ ಹಠ..! ಶೂನ್ಯದಿಂದ ಕೋಟಿ ಕೋಟಿ ದುಡ್ದು ಹರಿದುಬರುವಂತೆ ಮಾಡಿದ್ದು ಇವ್ರ ಲೆಕ್ಕಚಾರ..! ಈ ಮೂವರ ಮೇಲೆ ಯಾರು ಏನೇ ಟೀಕೆ, ಆರೋಪಗಳನ್ನು ಮಾಡಿದ್ರೂ ಭಾರತೀಯ ಕ್ರಿಕೆಟ್‍ಗೆ ಭದ್ರ ಅಡಿಪಾಯ ಹಾಕಿ, ಅದ್ಭುತವಾದ ಗೋಪುರವನ್ನು ಕಟ್ಟಿ ವಿಶ್ವ ಕ್ರಿಕೆಟ್‍ನಲ್ಲಿ ರಾರಾಜಿಸುವಂತೆ ಮಾಡಿದ್ದು ಇವ್ರ ಅಪ್ರತಿಮ ಸಾಧನೆ..!
ಈಗಾಗಲೇ ಈ ತ್ರಿಮೂರ್ತಿಗಳ ಪೈಕಿ ಎನ್.ಪಿ.ಕೆ. ಸಾಳ್ವೆ, ಜಗನ್ ಮೋಹನ್ ದಾಲ್ಮಿಯ ಎಂಬ ಎರಡು ಕೊಂಡಿಗಳು ಕಳಚಿ ಹೋಗಿವೆ. ಇದೀಗ ಮೂರನೇ ಕೊಂಡಿ ಇಂದರ್‍ಜಿತ್ ಸಿಂಗ್ ಬಿಂದ್ರಾ ಕೂಡ ಈ ಲೋಕವನ್ನು ಬಿಟ್ಟು ಹೋಗಿದ್ದಾರೆ. ಆದ್ರೆ ಅವರು ಮಾಡಿರುವ ಸಾಧನೆ, ಹೆಜ್ಜೆಗುರುತುಗಳು ಭಾರತೀಯ ಕ್ರಿಕೆಟ್‍ನಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿವೆ.
ಅದು 70-80ರ ದಶಕದ ಪೂರ್ವದಲ್ಲೇ ಭಾರತೀಯ ಕ್ರಿಕೆಟ್‍ನಲ್ಲಿ ಅದ್ಭುತ, ಪ್ರತಿಭಾವಂತ ಕ್ರಿಕೆಟಿಗರು ಇದ್ರು. ಅದು ಬ್ಯಾಟಿಂಗ್ ಆಗಿರಬಹುದು.. ವೇಗದ ಬೌಲಿಂಗ್ ಆಗಿರಬಹುದು.. ಮುಖ್ಯವಾಗಿ ಸ್ಪಿನ್ ಬೌಲಿಂಗ್.. ವಿಶ್ವ ಕ್ರಿಕೆಟ್‍ನಲ್ಲಿ ಗಮನ ಸೆಳೆದಿರುವಂತಹ ಆಟಗಾರರು ಇದ್ರು. ಆದ್ರೆ ಬಿಸಿಸಿಐ ಬೊಕ್ಕಸದಲ್ಲಿ ಮಾತ್ರ ದುಡ್ಡು ಇರಲಿಲ್ಲ. ಅಷ್ಟೇ ಯಾಕೆ, 1983ರ ವಿಶ್ವಕಪ್ ವಿಜೇತರಾದ ಕಪಿಲ್ ಡೆವಿಲ್ಸ್‍ಗೆ ಸನ್ಮಾನ ಮಾಡಲು ಲತಾ ಮಂಗೇಸ್ಕರ್ ಸಂಗೀತ ಕಾರ್ಯಕ್ರಮ ಮಾಡಬೇಕಾಗಿತ್ತು. ಅಂತಹ ದುಸ್ಥಿತಿಯಲ್ಲಿದ್ದ ಬಿಸಿಸಿಐಯನ್ನು ಕುಬೇರನ ಪಟ್ಟದಲ್ಲಿ ನಿಲ್ಲಿಸಿದ್ದು ಎನ್.ಪಿ.ಕೆ.ಸಾಳ್ವೆ.. ದಾಲ್ಮಿಯಾ ಮತ್ತು ಐಎಸ್‍ಬಿಂದ್ರಾ ಅವರ ಚಾಣಕ್ಯತನದ ಆಡಳಿತ.
ಬಹುಶಃ ಈ ಒಂದು ಘಟನೆ ನಡೆಯದೇ ಇರುತ್ತಿದ್ರೆ ಬಿಸಿಸಿಐ ಇಂದು ಮಮೂಲಿ ಕ್ರಿಕೆಟ್ ಸಂಸ್ಥೆಯಾಗಿರುತ್ತಿತ್ತು. ಅದಕ್ಕೆ ಕಾರಣ ಇಂಗ್ಲೀಷ್ ಕ್ರಿಕೆಟ್ ಮಂಡಳಿಯ ಅಹಂಕಾರದ ವರ್ತನೆ. ಸತತ ಮೂರು ವಿಶ್ವಕಪ್ ಆಯೋಜಿಸಿದ್ದ ಇಂಗ್ಲೆಂಡ್ ವಿಶ್ವಕಪ್ ಗೆಲ್ಲದಿದ್ರೂ ಕ್ರಿಕೆಟ್ ಜಗತ್ತಿಗೆ ನಾವೇ ಕಿಂಗ್ ಎಂದು ಬೀಗುತ್ತಿದ್ದರು. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಅಂದ್ರೆ ಬಡ ಕ್ರಿಕೆಟ್ ಸಂಸ್ಥೆ. ಈ ನಡುವೆ 1983ರಲ್ಲಿ ಭಾರತ ವಿಶ್ವಕಪ್ ಫೈನಲ್‍ಗೇರಿದ್ದು ಇಂಗ್ಲೀಷರಿಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ, ವಿಶ್ವಕಪ್ ಟೂರ್ನಿಯ ಫೈನಲ್ ಮ್ಯಾಚ್‍ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಭಾರತದ ಪ್ರಭಾವಿ ಮಂತ್ರಿಗಳಿಗೆ ಕೇವಲ ಎರಡೇ ಎರಡು ಟಿಕೆಟ್ ನೀಡಲು ನಿರಾಕರಿಸಿತ್ತು. ಅದು ಎನ್.ಪಿ.ಕೆ.ಸಾಳ್ವೆಯವರನ್ನು ಕೆರಳುವಂತೆ ಮಾಡಿತ್ತು. ಹೇಗಾದ್ರೂ ಮಾಡಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಪ್ರಭಾವಕ್ಕೆ ಕಡಿವಾಣ ಹಾಕಬೇಕು ಎಂದು ಮನದೊಳಗೆ ಯೋಚನೆ ಮಾಡಿದ್ರು. ಮೊದಲೇ ರಾಜಕಾರಣಿ.. ಐಸಿಸಿನಲ್ಲಿ ಆಂಗ್ಲರನ್ನು ಕಟ್ಟಿ ಹಾಕಬೇಕು ಅಂದ್ರೆ ಮೊದಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಗ್ಗಟ್ಟಾಗಿರಬೇಕು. ಅದಕ್ಕಾಗಿ ಪಾಕಿಸ್ತಾನ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಹಕಾರದೊಂದಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‍ಗೆ ಅಡಿಪಾಯ ಹಾಕಿಕೊಟ್ರು. ಅಷ್ಟೇ ಅಲ್ಲ, 1987ರ ವಿಶ್ವಕಪ್ ಟೂರ್ನಿಯ ಆಯೋಜನೆಗೆ ಪಾಕ್ ನೆರವಿನೊಂದಿಗೆ ಬಿಡ್ ಕೂಡ ಸಲ್ಲಿಸಿದ್ರು. ಆಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹುಸಿ ನಗೆ ಬೀರಿತ್ತು. ಇದಕ್ಕೆ ಸರಿಯಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕೂಡ ಭಾರತದಲ್ಲಿ ರಕ್ಷಣೆ ಇಲ್ಲ ಎಂಬ ನೆಪವನ್ನು ಒಡ್ಡಿ ಹಿಂದೇಟು ಹಾಕುವ ನಾಟಕ ಮಾಡಿತ್ತು.. ಆಗ ಎನ್‍ಪಿಕೆ ಸಾಳ್ವೆ ರಿಲ್ಯಾಯನ್ಸ್ ಸಂಸ್ಥೆಯ ನೆರವನ್ನು ಪಡೆದುಕೊಂಡ್ರು. ಇತ್ತ ಐಎಸ್ ಬಿಂದ್ರಾ ಅವರು ಜಗಮೋಹನ್ ದಾಲ್ಮಿಯಾ ಅವರ ಸ್ನೇಹದೊಂದಿಗೆ ರಾಜಕೀಯ ಆಟವನ್ನಾಡಿದ್ರು. ಪಾಕಿಸ್ಥಾನದ ಅಂದಿನ ಸರ್ವಾಧಿಕಾರಿ ಜಿಯಾ ಉಲ್ ಹಕ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಮಾಡಿದ್ರು. ಸಾಳ್ವೆ, ಬಿಂದ್ರಾ, ದಾಲ್ಮಿಯಾ ಅವರ ಮಾಸ್ಟರ್ ಮೈಂಡ್ ವರ್ಕ್ ಔಟ್ ಆಗಿತ್ತು. ಹಾಗಾಗಿಯೇ ಭಾರತ – ಪಾಕ್ ಜಂಟಿಯಾಗಿ 1987ರ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜನೆ ಮಾಡಿತ್ತು. ಈ ಮೂಲಕ ಈ ಮೂವರು ಸೇರಿಕೊಂಡು ಐಸಿಸಿನಲ್ಲಿ ಇಂಗ್ಲೆಂಡ್‍ನ ಏಕಚಕ್ರಾಧಿತಿಪತ್ಯವನ್ನು ಅಂತ್ಯಗೊಳಿಸಿದ್ರು.
ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ಮಂಡಳಿಯ ಅಕೌಂಟ್‍ಗೆ ದುಡ್ಡು ಸೇರುವಂತೆ ಮಾಡಿದ್ದು ಕೂಡ ಬಿಂದ್ರಾ ಮತ್ತು ಜಗ್ಗು ಜೋಡಿ. 90ರ ದಶಕದಲ್ಲಿ ಭಾರತೀಯ ಕ್ರಿಕೆಟ್‍ನ ಸ್ವರೂಪವನ್ನೇ ಬದಲಾಯಿಸಿದ್ದು ಬಿಂದ್ರಾ – ಜಗ್ಗು ದೂರದೃಷ್ಟಿಯ ಅಲೋಚನೆಗಳು ಹಾಗೂ ದಿಟ್ಟ ನಿರ್ಧಾರಗಳು. ಅಲ್ಲಿಯ ತನಕ ದೂರದರ್ಶನಕ್ಕೆ ಬಿಟ್ಟಿಯಾಗಿ ನೇರ ಪ್ರಸಾರದ ಹಕ್ಕು ನೀಡುತ್ತಿದ್ದ ಬಿಸಿಸಿಐ, ಇಎಸ್‍ಪಿಎನ್‍ನಂತಹ ಖಾಸಗಿ ಚಾನೆಲ್‍ಗಳಿಗೆ ನೇರ ಪ್ರಸಾರದ ಹಕ್ಕು ನೀಡಿ ಬಿಸಿಸಿಐಗೆ ಹಣ ಬರುವಂತೆ ಮಾಡಿದ್ರು.
ಇನ್ನು, ದಾಲ್ಮಿಯಾ ಮತ್ತು ಬಿಂದ್ರಾ ಜೋಡಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಬಿಂದ್ರಾ ಕನಸುಗಳನ್ನು ಕಾಣುವ ಕನಸುಗಾರ. ಜೊತೆಗೆ ಅಂದುಕೊಂಡಿರುವುದನ್ನು ಸಾಧಿಸುವ ಛಲ ಮತ್ತು ಧೈರ್ಯವಿತ್ತು. ಹಾಗೇ ದಾಲ್ಮಿಯಾ ಯಾವುದು ಅಸಾಧ್ಯವೋ ಅದನ್ನು ಕಾರ್ಯರೂಪಕ್ಕೆ ತರುವ ಚಾಣಕ್ಯ. ಅದಕ್ಕೆ ತಕ್ಕಂತೆ ಬಿಸಿಸಿಐನಲ್ಲಿ ತಮ್ಮದೇ ಆದ ತಂಡವೊಂದನ್ನು ಕಟ್ಟಿಕೊಂಡು ಎಲ್ಲರೂ ಬೆರಗುಗೊಳ್ಳುವಂತೆ ವಿಶ್ವ ಕ್ರಿಕೆಟ್‍ನಲ್ಲಿ ಬಿಸಿಸಿಐಯನ್ನು ಶ್ರೀಮಂತಗೊಳಿಸಿದ್ರು.
ಅಲ್ಲಿಯ ತನಕ ರೆಡಿಯೋ, ದೂರದರ್ಶನದಲ್ಲಿ ಕ್ರಿಕೆಟ್ ಪಂದ್ಯವನ್ನು ಕೇಳಿಕೊಂಡು ಮನೆಯಲ್ಲೇ ನೋಡುತ್ತಿದ್ದ ಜನರನ್ನು ಮೈದಾನಕ್ಕೆ ಬರುವಂತೆ ಮಾಡಿದ್ರು. ಸಚಿನ್‍ನಂತಹ ಆಟಗಾರನ ಜನಪ್ರಿಯತೆಯನ್ನು ಬಂಡವಾಳವನ್ನಾಗಿಸಿಕೊಂಡ ಬಿಂದ್ರಾ ಮತ್ತು ದಾಲ್ಮಿಯಾ 1996ರಲ್ಲಿ ಎರಡನೇ ಬಾರಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿದ್ರು. ಸೆಮಿಫೈನಲ್‍ನಲ್ಲಿ ಭಾರತ ಸೋತ್ರೂ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಬಿಸಿಸಿಐನ ಗತ್ತು, ಪವರ್ ಏನು ಎಂಬುದನ್ನು ತೋರಿಸಿಕೊಟ್ಟಿದ್ದು ಸಹ ಬಿಂದ್ರಾ ಮತ್ತು ದಾಲ್ಮಿಯಾ.
1975ರಿಂದ 2014ರವರೆಗೆ ಬಿಸಿಸಿಐ ಎಂಬ ಪವರ್ ಹೌಸ್‍ನಲ್ಲಿ ಕೆಲಸ ಮಾಡುತ್ತಿದ್ದ ಬಿಂದ್ರಾ ಅವರು, 1993ರಿಂದ 96ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಸುಮಾರು 36 ವರ್ಷಗಳ ಕಾಲ ಪಂಜಾಬ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದರು. ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದಾಗ ಅವರ ಸಲಹೆಗಾರನಾಗಿಯೂ ಕೆಲಸ ಮಾಡಿದ್ರು. ಐಪಿಎಲ್ ಪರಿಕಲ್ಪನೆಗೂ ಬಿಂದ್ರಾ ಅವರು ಸಾಥ್ ನೀಡಿದ್ರು. ಅಷ್ಟೇ ಅಲ್ಲ ಮಾಜಿ ರಾಷ್ಟ್ರಪತಿ ದಿ. ಗ್ಯಾನಿ ಜೈಲ್ ಸಿಂಗ್ ಅವರ ವಿಶೇಷ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ರು.
ಇಂತಹ ಧೀಮಂತ ಆಡಳಿತಗಾರ ಐಎಸ್ ಬಿಂದ್ರಾ ಅವರು ಇಹಲೋಕ ತ್ಯಜಿಸಿದ್ದಾರೆ.
ಇವತ್ತು ಭಾರತದಲ್ಲಿ ಆಟಗಾರರಿಂದ ಮಾತ್ರ ಕ್ರಿಕೆಟ್ ಜನಪ್ರಿಯತೆ ಪಡೆದುಕೊಂಡಿಲ್ಲ. ಬದಲಾಗಿ ಸಾಳ್ವೆ, ದಾಲ್ಮಿಯಾ, ಬಿಂದ್ರಾ, ಶರದ್ ಪವಾರ್‍ನಂತಹ ನಾಯಕರ ದೂರದೃಷ್ಟಿಯ ಆಡಳಿತದಿಂದ ಇಡೀ ವಿಶ್ವ ಕ್ರಿಕೆಟ್ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಅದರಲ್ಲೂ ಆಟಗಾರರ ಪ್ರತಿಭೆ, ಅವರಿಗೆ ಆಧುನಿಕ ಸೌಲಭ್ಯಗಳು, ಅಭಿಮಾನಿಗಳ ಪ್ರೀತಿಯನ್ನಿಟ್ಟುಕೊಂಡು ಕ್ರಿಕೆಟ್‍ನಲ್ಲಿ ಈ ರೀತಿಯೂ ದುಡ್ಡು ಮಾಡಬಹುದು.. ಕ್ರಿಕೆಟ್ ಜಗತ್ತನ್ನು ಆಳಬಹುದು ಎಂಬುದನ್ನು ತೋರಿಸಿಕೊಟ್ಟ ಧೀಮಂತ ನಾಯಕ ಇಂದರ್‍ಜಿತ್ ಸಿಂಗ್ ಬಿಂದ್ರಾ…!
ನೀವು ಏನು ಬೇಕಾದ್ರೂ ಹೇಳಬಹುದು.. ಐಪಿಎಲ್ ಅಂದ ತಕ್ಷಣ ಒಂದು ಕ್ಷಣ ಲಲಿತ್ ಮೋದಿ ನೆನಪು ಆಗುತ್ತೆ. ಆದ್ರೆ ಐಪಿಎಲ್ ಎಂಬ ದೇಸಿ ಕ್ರಿಕೆಟ್ ವಿಶ್ವ ಕ್ರಿಕೆಟ್‍ನಲ್ಲಿ ಇಷ್ಟೊಂದು ಸಂಚಲನ ಮೂಡಿಸಲು ಬಿಂದ್ರಾ ಅವರ ಸಲಹೆ ಮತ್ತು ಬೆಂಬಲ ಇಲ್ಲದೇ ಇರುತ್ತಿದ್ರೆ ಅದು ಸಾಧ್ಯವಾಗುತ್ತಿರಲಿಲ್ಲ. ನೇರ ನುಡಿ, ದಿಟ್ಟ ಹೆಜ್ಜೆ ಹಾಗೂ ತಾನು ನಂಬಿದವರನ್ನು ಎಂದೂ ಕೈಬಿಡದ ಲೀಡರ್ ಇಂದರ್‍ಜಿತ್ ಸಿಂಗ್ ಬಿಂದ್ರಾ.. ಹೋಗಿ ಬನ್ನಿ ಸರ್.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..! ಭಾರತೀಯ ಕ್ರಿಕೆಟ್‍ಗೆ ನೀವು ಕೊಟ್ಟ ಕಾಣಿಕೆಯನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಆರೋಪ, ಟೀಕೆಗಳು ಏನೇ ಇರಲಿ.. ಇವತ್ತು ಭಾರತದ ಬೇರೆ ಬೇರೆ ಕ್ರೀಡಾ ಸಂಸ್ಥೆಗಳ ವ್ಯವಸ್ಥೆಯನ್ನು ನೋಡಿದಾಗ ನಿಮ್ಮಂತಹ ದೂರದೃಷ್ಟಿಯ ಆಡಳಿತಗಾರರರು ಭಾರತದ ಪ್ರತಿಯೊಂದು ಕ್ರೀಡಾ ಸಂಸ್ಥೆಗಳಲ್ಲೂ ಇರಬೇಕಿತ್ತು. ನಿಮ್ಮ ಅಲೋಚನೆ, ಚಾಣಕ್ಷ ನೀತಿ, ದೂರದೃಷ್ಟಿಯ ಆಡಳಿತ, ಧೈರ್ಯ, ಆತ್ಮವಿಶ್ವಾಸ, ಸಂಘಟನೆಯ ಶಕ್ತಿ ಎಲ್ಲವೂ ಮಾದರಿ..!
ಸನತ್ ರೈ








