ಭಾರತ ಆಸ್ಟ್ರೇಲಿಯಾ ನಡುವೆ ಐತಿಹಾಸಿಕ ಒಪ್ಪಂದ
ಹೊಸದಿಲ್ಲಿ, ಜೂನ್ 5: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ವಿಡಿಯೊ ಕಾನ್ಫರೆನ್ಸ್ ಮೂಲಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಒಪ್ಪಂದಗಳ ಬಗ್ಗೆ ಡೀಲ್ ಮಾಡಲಾಗಿದೆ.
ಮೊದಲ ಬಾರಿಗೆ ಮೋದಿಯವರು ವಿದೇಶಿ ನಾಯಕರೊಬ್ಬರ ಜೊತೆಗೆ ವಿಡಿಯೊ ಕಾನ್ಫರೆನ್ಸ್ ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ಕೋವಿಡ್-19, ಭಾರತದ ಸ್ಥಿತಿಗತಿ, ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಬಗ್ಗೆ ಮಾತನಾಡಿದರು.
ಮೊರಿಸನ್ ರ ಜೊತೆಗಿನ ಮಾತುಕತೆಯನ್ನು ಅದ್ವಿತಿಯ ಎಂದು ಬಣ್ಣಿಸಿರುವ ಮೋದಿ ಮೊದಲು ಸಮಸ್ತ ಭಾರತೀಯರ ಪರವಾಗಿ ನಾನು ಆಸ್ಟ್ರೇಲಿಯಾದಲ್ಲಿ ಕೋವಿಡ್-19 ನಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಮಾತು ಪ್ರಾರಂಭಿಸಿದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎಲ್ಲಾ ರೀತಿಯ ಸಂಬಂಧಗಳ ವೃದ್ಧಿಗೆ ಇದು ಸರಿಯಾದ ಸಮಯ. ನಮ್ಮ ಸಾಮರ್ಥ್ಯಗಳನ್ನು ವಾಸ್ತವವಾಗಿ ಬದಲಾಯಿಸಲು ಕೂಡ ನಮಗೆ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ. ಇದು ನಮ್ಮ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲು ಕಾರಣವಾಗಲಿದೆ ಎಂದು ಹೇಳಿದರು.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಮಾತನಾಡಿ, ನೀವು ಭಾರತದಲ್ಲಿ ಮಾತ್ರ ನಾಯಕತ್ವವನ್ನು ಹೊಂದಿಲ್ಲ, ಜಿ20, ಇಂಡೊ-ಫೆಸಿಫಿಕ್ ಗಳಲ್ಲಿ ಸಹ ಪ್ರಭಾವಶಾಲಿಯಾಗಿದ್ದೀರಿ. ಇಂತಹ ಸಂಕಷ್ಟ ಸಮಯದಲ್ಲೂ ನೀವು ರಚನಾತ್ಮಕ, ಸಕಾರಾತ್ಮಕ, ಸ್ಥಿರತೆಯಿಂದ ವರ್ತಿಸಿದ್ದೀರಿ. ಇಂಡೋ-ಪೆಸಿಫಿಕ್ ಗೆ ನಾವು ಬದ್ಧರಾಗಿದ್ದು, ಮುಂದಿನ ವರ್ಷಗಳಲ್ಲಿ ಆ ಪ್ರದೇಶದಲ್ಲಿ ಭಾರತದ ಪಾತ್ರ ನಿರ್ಣಾಯಕವಾಗಿರಲಿದೆ ಎಂದರು.
ಸೇನಾ ನೆಲೆಗಳ ಬಳಕೆ ಸೇರಿದಂತೆ ಭಾರತ- ಆಸ್ಟ್ರೇಲಿಯಾ ಒಟ್ಟು ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು, ಪರಸ್ಪರರ ಸೇನಾನೆಲೆಗಳನ್ನು ಬಳಸಿಕೊಳ್ಳುವ ಒಪ್ಪಂದ ಕೂಡ ಇದರಲ್ಲಿದೆ.ಉಳಿದಂತೆ ಆರೋಗ್ಯ, ವ್ಯಾಪಾರ, ರಕ್ಷಣಾ ವ್ಯವಸ್ಥೆಯ ಬಗ್ಗೆ ಮತ್ತು ಎರಡು ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ಬಗ್ಗೆ ಕೂಡ ಒಪ್ಪಂದ ಮಾಡಿಕೊಳ್ಳಲಾಗಿದೆ.








