ಭಾರತದ ಆಸ್ಟ್ರೇಲಿಯಾ ಪ್ರವಾಸ… ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ನವೆಂಬರ್ 27ರಂದು ಸಿಡ್ನಿಯಲ್ಲಿ ನಡೆಯಲಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸುಮಾರು 9 ತಿಂಗಳ ಬಳಿಕ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಐಪಿಎಲ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾ ವಿರುದ್ಧ ಆಗ್ನಿಪರೀಕ್ಷೆ ಎದುರಿಸಲಿದ್ದಾರೆ.
ಜಿದ್ದಾಜಿದ್ದಿನಿಂದ ಸಾಗಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಲಿದೆ. ಉಭಯ ತಂಡಗಳು ಕೋವಿಡ್ ಕ್ವಾರಂಟೈನ್ ಸಮಯದಲ್ಲಿ ಅಭ್ಯಾಸ ನಡೆಸಿವೆ. ಹಾಗೇ ಜೈವಿಕ ಸುರಕ್ಷತೆಯಡಿಯಲ್ಲಿ ಈ ಪಂದ್ಯಗಳು ನಡೆಯಲಿವೆ.
ಬಲಿಷ್ಠ ಹಾಗೂ ಯುವ ಆಟಗಾರರನ್ನೊಳಗೊಂಡಿರುವ ಉಭಯ ತಂಡಗಳ ಕಾದಾಟ ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಅಂದ್ರೆ ಟೀಮ್ ಇಂಡಿಯಾಗೆ ಕಠಿಣ ಸವಾಲು. ಹಾಗೇ ಆಸ್ಟ್ರೇಲಿಯಾ ತಂಡಕ್ಕೂ ಕೂಡ ಅಷ್ಟೇ. ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳಿಗೆ ಆಸ್ಟ್ರೇಲಿಯನ್ ಬೌಲರ್ ಗಳು ಮಾರಕವಾಗಿ ಕಾಡಿದ್ರೆ, ಟೀಮ್ ಇಂಡಿಯಾ ಬೌಲರ್ ಗಳು ಆಸ್ಟ್ರೇಲಿಯಾದ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗುವಂತಹ ಪ್ರದರ್ಶನವನ್ನು ನೀಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಹೀಗಾಗಿ ಎರಡು ತಂಡಗಳ ಆಟಗಾರರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಇನ್ನು ಒಟ್ಟಾರೆ ಉಭಯ ತಂಡಗಳ ಬಲಾಬಲವನ್ನು ನೋಡುವುದಾದ್ರೆ ಆಸ್ಟ್ರೇಲಿಯಾವೇ ಮುನ್ನಡೆ ಸಾಧಿಸಿದೆ. ಆಡಿರುವ 140 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 78 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೇ ಭಾರತ 52 ಪಂದ್ಯಗಳನ್ನು ಗೆದ್ದಿದೆ. 10 ಪಂದ್ಯಗಳ ಫಲಿತಾಂಶ ಬಂದಿಲ್ಲ.
ಇನ್ನೊಂದೆಡೆ ಕಳೆದ ವರ್ಷದ ಸರಣಿಯಲ್ಲಿ ಟೀಮ್ ಇಂಡಿಯಾ 2-1ರಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದೆ. ಆದ್ರೆ 2018ರ ಸರಣಿಯಲ್ಲಿ ಆಸ್ಟ್ರೇಲಿಯಾ 3-2ರಿಂದ ಗೆಲುವಿನ ನಗೆ ಬೀರಿದೆ. ಜೊತೆಗೆ 2017ರ ಸರಣಿಯಲ್ಲಿ ಟೀಮ್ ಇಂಡಿಯಾ 2-1ರಿಂದ ಜಯ ಸಾಧಿಸಿದೆ.
ಆಸ್ಟ್ರೇಲಿಯಾ ತಂಡ
ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಲಾಬುಸ್ಚಗ್ನೆ, ಗ್ಲೇನ್ ಮ್ಯಾಕ್ಸ್ ವೆಲ್, ಆಲೆಕ್ಸ್ ಕಾರೆ, ಪ್ಯಾಟ್ ಕಮಿನ್ಸ್, ಮಿಟ್ಚೆಲ್ ಸ್ಟಾರ್ಕ್, ಆಡಂ ಝಂಪಾ, ಜೋಶ್ ಹಾಜ್ಲೆವುಡ್.
ಟೀಮ್ ಇಂಡಿಯಾ – ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ ವಾಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ, ನವದೀಪ್ ಸೈನಿ, ಯುಜುವೇಂದ್ರ ಚಾಹಲ್.








