ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಹೈಲೈಟ್ಸ್…!
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 195 ರನ್ ಕಟ್ಟಿ ಹಾಕಿದ್ದ ಟೀಮ್ ಇಂಡಿಯಾ ದಿನದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.
ದಿನದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ಮಯಾಂಕ್ ಅಗರ್ ವಾಲ್ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡ್ರು.
ನಂತರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಶುಬ್ಮನ್ ಗಿಲ್ ಜೊತೆ ಚೇತೇಶ್ವರ ಪೂಜಾರ ಸೇರಿಕೊಂಡ್ರು. ಆಸೀಸ್ ನ ಲಯಬದ್ಧವಾದ ಎಸೆತಗಳನ್ನು ತಾಳ್ಮೆಯಿಂದಲೇ ಎದುರಿಸಿದ್ದ ಇವರಿಬ್ಬರು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಎಚ್ಚರಿಕೆ, ಸಂಯಮದಿಂದ ಬ್ಯಾಟ್ ಬೀಸುತ್ತಿದ್ದ ಶುಬ್ಮನ್ ಗಿಲ್ ಅಜೇಯ 28 ರನ್ ಗಳಿಸಿದ್ರೆ, ಚೇತೇಶ್ವರ ಪೂಜಾರ ಅಜೇಯ ಏಳು ರನ್ ಗಳಿಸಿದ್ದಾರೆ.
ಇದಕ್ಕು ಮೊದಲು ಟಾಸ್ ಗೆದ್ದ ಆಸೀಸ್ 195 ರನ್ ಗೆ ಸರ್ವಪತನಗೊಂಡಿತ್ತು. ಜಸ್ಪ್ರಿತ್ ಬೂಮ್ರಾ ನಾಲ್ಕು ವಿಕೆಟ್ ಪಡೆದ್ರೆ, ಅಶ್ವಿನ್ ಮೂರು ವಿಕೆಟ್ ಹಾಗೂ ಮಹಮ್ಮದ್ ಸಿರಾಜ್ ಎರಡು ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದ್ರು.
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವಾಡೆ 30 ರನ್, ಲಾಬುಸ್ಚೆಂಜ್ 38, ಟ್ರಾವಿಡ್ ಹೆಡ್ 28 ಹಾಗೂ ನಥಾನ್ ಲಿಯಾನ್ 20 ರನ್ ಗಳಿಸಿದ್ರು.
ಇನ್ನು ಬಾಕ್ಸಿಂಗ್ ಡೇ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಆಗಮಿಸಿದ್ದರು.292 ದಿನಗಳ ನಂತರ ಎಮ್‍ಸಿಜಿ ಅಂಗಣದಲ್ಲಿ ಕೊಂಚ ಮಟ್ಟಿನ ಚೀರಾಟಗಳು ಕೇಳಿ ಬಂದವು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪ್ರೇಕ್ಷಕರು ಮೈದಾನಕ್ಕೆ ಬಂದಿದ್ದರು. ಇದೇ ವೇಳೆ ಭಾರತೀಯ ಅಭಿಮಾನಿಗಳು ಕೂಡ ಬಂದಿದ್ದರು.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ಮೆಲ್ಬರ್ನ್ ಅಂಗಣದಲ್ಲಿ ಭಾರತದ ರಾಷ್ಟ್ರ ಗೀತೆ ಮೊಳಗಿತ್ತು.
ಪಂದ್ಯದ ನಡುವೆ ಇತ್ತೀಚೆಗೆ ನಿಧನರಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜೋನ್ಸ್ ಅವರಿಗೆ ಗೌರವ ನಮನ ಸಲ್ಲಿಸಲಾಯ್ತು. ಡೀನ್ ಜೋನ್ಸ್ ಪತ್ನಿ, ಪುತ್ರಿಯರು ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಆಲನ್ ಬೋರ್ಡರ್, ಟೀಮ್ ಇಂಡಿಯಾ ಮತ್ತು ಆಸೀಸ್ ಆಟಗಾರರು ಗೌರವ ಸಲ್ಲಿಸಿದ್ರು. ಸ್ಟಂಪ್ ಮೇಲೆ ಡೀನ್ ಜೋನ್ಸ್ ಬಳಕೆ ಮಾಡುತ್ತಿದ್ದ ಬ್ಯಾಟ್ ಮತ್ತು ಕ್ಯಾಪ್ ಹಾಕಿ ಡೀನ್ ಜೋನ್ಸ್ ಅವರಿಗೆ ಗೌರವ ಸಲ್ಲಿಸಲಾಯ್ತು.
ಅಂದ ಹಾಗೇ ಆಸೀಸ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯ ಐತಿಹಾಸಿಕ ಪಂದ್ಯವಾಗಿದೆ. ಉಭಯ ತಂಡಗಳು ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿವೆ. ಆಸಿಸ್ 43 ಪಂದ್ಯಗಳನ್ನು ಗೆದ್ದುಕೊಂಡಿದ್ರೆ, ಭಾರತ 28 ಪಂದ್ಯಗಳನ್ನು ಗೆದ್ದಿದೆ. ಹಾಗೆ 13ನೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಗಿದೆ. 2018ರಲ್ಲಿ ಭಾರತ 136 ರನ್ ಗಳಿಂದ ಬಾಕ್ಸಿಂಗ್ ಡೇ ಪಂದ್ಯವನ್ನು ಗೆದ್ದುಕೊಂಡಿತ್ತು. ಒಟ್ಟಾರೆಯಾಗಿ 13 ಪಂದ್ಯಗಳ ಪೈಕಿ ಆಸೀಸ್ ಎಂಟು ಪಂದ್ಯಗಳನ್ನು ಗೆದ್ರೆ, ಭಾರತ ಮೂರು ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.