ಇಂಡೋ ಆಸೀಸ್ (ಎ) ಅಭ್ಯಾಸ ಪಂದ್ಯ- ಶಮಿ, ಸೈನಿ ಮಾರಕ ದಾಳಿ, ಬೂಮ್ರಾ ಆಲ್ ರೌಂಡ್ ಆಟ..!
ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳು ಎಡವಿದ್ರೆ, ಬೌಲರ್ ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ.
ಸಿಡ್ನಿ ಮೈದಾನದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕ ಮಯಾಂಕ್ ಆಗರ್ವಾಲ್ 2 ರನ್ ಗೆ ಔಟಾಗಿ ನಿರಾಸೆ ಮೂಡಿಸಿದ್ರು.
ನಂತರ ಪೃಥ್ವಿ ಶಾ ಮತ್ತು ಶುಬ್ಮನ್ ಗಿಲ್ ಅವರು ಎರಡನೇ ವಿಕೆಟ್ ಗೆ 63 ರನ್ ಪೇರಿಸಿದ್ರು. ಈ ಹಂತದಲ್ಲಿ 40 ರನ್ ಗಳಿಸಿದ್ದ ಪೃಥ್ವಿ ಶಾ ಪೆವಿಲಿಯನ್ ದಾರಿ ಹಿಡಿದ್ರು. ಇನ್ನೊಂದೆಡೆ ಶುಬ್ಮನ್ ಗಿಲ್ 43 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಈ ನಡುವೆ ಹನುಮ ವಿಹಾರಿ 15 ರನ್ ಗೆ ಸೀಮಿತವಾದ್ರೆ, ನಾಯಕ ಅಜ್ಯಂಕ್ಯಾ ರಹಾನೆ 4 ರನ್, ರಿಷಬ್ ಪಂತ್ 5 ರನ್ ಹಾಗೂ ವೃದ್ದಿಮಾನ್ ಸಾಹಾ ಶೂನ್ಯಕ್ಕೆ ಔಟಾದ್ರು.
ಹಾಗೇ ನವದೀಪ್ ಸೈನಿ 4 ರನ್ ಮತ್ತು ಮಹಮ್ಮದ್ ಶಮಿ ಸೊನ್ನೆ ಸುತ್ತಿದ್ರು.
ಅಂತಿಮವಾಗಿ ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಸಿರಾಜ್ ಕೊನೆಯ ವಿಕೆಟ್ಗೆ ಅತ್ಯುತ್ತಮ ಜೊತೆಯಾಟವನ್ನಾಡಿದ್ರು. ಜಸ್ಪ್ರಿತ್ ಬೂಮ್ರಾ ಅಜೇಯ 55 ರನ್ ಸಿಡಿಸಿದ್ರೆ, ಸಿರಾಜ್ 22 ರನ್ ಗಳಿಸಿದ್ರು. ಪರಿಣಾಮ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 194 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಸವಾಲನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯ ಎ ತಂಡಕ್ಕೆ ಟೀಮ್ ಇಂಡಿಯಾ ಬೌಲರ್ ಗಳು ಕಂಟಕವಾಗಿ ಪರಿಣಮಿಸಿದ್ರು.
ಆಸ್ಟ್ರೇಲಿಯಾ ಎ ತಂಡದ ಪರ ಮಾರ್ಕಸ್ ಹ್ಯಾರಿಸ್ 26 ರನ್, ನಿಕ್ ಮ್ಯಾಡಿಸನ್ 19 ರನ್, ಅಲೆಕ್ಸ್ ಕ್ಯಾರೆ 32 ರನ್ ಹಾಗೂ ಜಾಕ್ ವಿಲ್ರ್ಡೆಮುಟ್ 12 ರನ್ ಗಳಿಸಿದ್ರು. ಉಳಿದಂತೆ ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು. ಅಂತಿಮವಾಗಿ ಆಸ್ಟ್ರೇಲಿಯಾ ಎ ತಂಡ 108 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 86 ರನ್ ಗಳ ಮುನ್ನೆಡೆಯನ್ನು ಪಡೆದುಕೊಂಡಿದೆ.
ಟೀಮ್ ಇಂಡಿಯಾ ಪರ ಮಹಮ್ಮದ್ ಶಮಿ ಮತ್ತು ನವದೀಪ್ ಸೈನಿ ತಲಾ ಮೂರು ವಿಕೆಟ್ ಪಡೆದ್ರೆ, ಮಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸಿದ್ರು. ಜಸ್ಪ್ರಿತ್ ಬೂಮ್ರಾ ಎರಡು ವಿಕೆಟ್ ಉರುಳಿಸಿದ್ರು.