ಹೊಸದಿಲ್ಲಿ, ಜೂನ್ 8: ಚೀನಾ ಸೇನೆ ಭಾರತ ಚೀನಾ ಗಡಿಯಲ್ಲಿ ಕ್ಯಾಂಪ್ಗಳನ್ನು ನಿರ್ಮಿಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಭಾರತ ಮತ್ತು ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನಲೆಯಲ್ಲಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜನರಲ್ ಬಿಪಿನ್ ರಾವತ್ ಅವರನ್ನು ಭೇಟಿಯಾಗಿ ಪ್ರಮಖ ವಿಷಯಗಳ ಕುರಿತಂತೆ ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲ ವಾಯು ಸೇನೆ, ಜಲ ಸೇನೆ ಮತ್ತು ಭೂ ಸೇನೆಯ ಮುಖ್ಯಸ್ಥರೊಂದಿಗೂ ಸಭೆ ನಡಿಸಿರುವ ರಾಜನಾಥ್ ಸಿಂಗ್ ಭಾರತ ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಚೀನಾದ ಗ್ಲೋಬಲ್ ಟೈಮ್ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆದರ ಪ್ರಕಾರ ಲಡಾಖ್ ಬಳಿ ಚೀನಾ ಮತ್ತೆ ತನ್ನ ಸೇನೆಯನ್ನು ದ್ವಿಗುಣಗೊಳಿಸುತ್ತಿದೆ. ಶಸ್ತ್ರ ಸಜ್ಜಿತ ವಾಹನಗಳೊಂದಿಗೆ ನೂರಾರು ಸೈನಿಕರು ಟ್ಯಾಂಕರ್ಗಳೊಂದಿಗೆ ಗಡಿಯತ್ತ ನುಗ್ಗಿ ಬರುತ್ತಿದ್ದಾರೆ.
ಎರಡು ದಿನಗಳ ಹಿಂದೆ ಭಾರತ ಚೀನಾದ ಲೆಫ್ಟಿನೆಂಟ್ ಜನರಲ್ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ್ದು, ಚೀನಾ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿತ್ತು. ಆದರೆ ನಿನ್ನೆ ಸಂಜೆಯ ವೇಳೆ ಸಾವಿರಾರು ಸಂಖ್ಯೆಯಲ್ಲಿ ಯೋಧರು, ಟ್ಯಾಂಕರ್ ಸಮೇತ ಪೂರ್ವ ಲಡಾಖ್ನಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ.








