ಭಾರತ -ಚೀನಾ ಗಡಿ ಮತ್ತೆ ಉದ್ವಿಗ್ನ – ಯುದ್ಧ ಟ್ಯಾಂಕ್ ಗಳೊಂದಿಗೆ ಸಜ್ಜಾದ ಉಭಯ ರಾಷ್ಟ್ರಗಳ ಸೈನಿಕರು
ಲಡಾಖ್, ಸೆಪ್ಟೆಂಬರ್01: ಇಂದು ಚುಷುಲ್‌ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಭಾರತ ಮತ್ತು ಚೀನಾ ನಡುವೆ ಹೊಸ ಸುತ್ತಿನ ಮಿಲಿಟರಿ ಮಾತುಕತೆ ನಡೆಯುತ್ತಿದೆ. ಆದರೆ ಪಾಂಗೊಂಗ್ ಸರೋವರದ ಸುತ್ತಲೂ ದೇಶಗಳ ಸೈನ್ಯ ಸೈನಿಕರ ಮತ್ತು ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಹೆಚ್ಚಿಸಿದ್ದು, ಯುದ್ಧದ ಟ್ಯಾಂಕ್ಗಳೊಂದಿಗೆ ಪರಸ್ಪರ ಗುಂಡಿನ ದಾಳಿ ನಡೆಸುವಷ್ಟು ಅಂತರದಲ್ಲಿ ಬೀಡುಬಿಟ್ಟಿವೆ.
ಚೀನಾದ ಯುದ್ಧದ ಟ್ಯಾಂಕ್ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ವಾಹನಗಳು ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವ ಕಾಲಾ ಟಾಪ್ ತಪ್ಪಲು ಪ್ರದೇಶದ ಬಳಿ ಜಮಾವಣೆಯಾಗಿದೆ.
ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಕಣ್ಗಾವಲು ಕಾರ್ಯವಿಧಾನಗಳನ್ನು ಹೆಚ್ಚಿಸಿದ್ದು, ಫಿರಂಗಿ, ಯುದ್ಧದ ಟ್ಯಾಂಕ್ ಮತ್ತು ಅಗತ್ಯ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿದೆ.
ವಾಸ್ತವ ನಿಯಂತ್ರಣ ರೇಖೆ ಸಮೀಪ ಮತ್ತೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸ್ಪ್ಯಾಂಗೂರ್ ತ್ಸೋ ಮತ್ತು ಚುಶುಲ್ ನಡುವಿನ ಸೂಕ್ಷ್ಮ ಪ್ರದೇಶವಾದ ನೈಋತ್ಯ ಬಯಲು ಪ್ರದೇಶಗಳಲ್ಲಿ ಭಾರತೀಯ ತನ್ನ ಯುದ್ಧ ಟ್ಯಾಂಕ್ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಿದೆ.
ಭಾರತ-ಚೀನಾ ನಡುವೆ ಗಾಲ್ವಾನ್ ಘರ್ಷಣೆಯ ಬಳಿಕ ಅನೇಕ ಬಾರಿ ಸೇನೆ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ನಡೆದಿದ್ದರೂ ಎಲ್ಲಾ ಒಪ್ಪಂದಗಳನ್ನು ಚೀನಾ ಗಾಳಿಗೆ ತೂರಿ ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ.
ಆಗಸ್ಟ್ 29-30 ರ ಮಧ್ಯರಾತ್ರಿ ಚೀನಾ ಸೈನಿಕರು ಪ್ಯಾಂಗೋಂಗ್ ಸರೋವರದ ದಕ್ಷಿಣ ತೀರದ ಬಳಿ ಅತಿಕ್ರಮಣ ನಡೆಸಲು ಯತ್ನಿಸಿದ್ದರು. ಆದರೆ ಅವರ ಉದ್ದೇಶವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ನಿನ್ನೆ ರಕ್ಷಣಾ ಸಚಿವಾಲಯ ಹೇಳಿತ್ತು.








