ನವದೆಹಲಿ: ಭಾರತ (India) ಹಾಗೂ ಚೀನಾ (China) ಪೂರ್ವ ಲಡಾಖ್ನ ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಎರಡೂ ರಾಷ್ಟ್ರಗಳ ಸೇನೆ ಗಸ್ತು ತಿರುಗುವುದನ್ನು ಮತ್ತೆ ಆರಂಭಿಸಲು ಒಪ್ಪಂದವಾಗಿದೆ.
16ನೇ ಬ್ರಿಕ್ಸ್ ಶೃಂಗಸಭೆಗಾಗಿ (BRICS Summit) ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಗಡಿಯಲ್ಲಿ ಉಭಯ ದೇಶಗಳ ಗಸ್ತು ತಿರುಗುವ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದ್ದ. ಪರಿಣಾಮ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ವ್ಯವಸ್ಥೆಯ ಒಪ್ಪಂದ ಮಾಡಿಕೊಳ್ಳಲಾಗಿದೆ.
ಡೆಪ್ಸಾಂಗ್ ಪ್ಲೇನ್ಸ್ ಮತ್ತು ಡೆಮ್ಚೋಕ್ LAC ಉದ್ದಕ್ಕೂ ಇರುವ ಗಸ್ತು ತಿರುಗುವಿಕೆ ಪುನರಾರಂಭಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ 2020 ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
2020ರ ಜೂನ್ 15ರಂದು ಗಾಲ್ವಾನ್ ನಲ್ಲಿ ಎರಡೂ ದೇಶಗಳ ಸೈನಿಕರ ಮಧ್ಯೆ ಘರ್ಷಣೆ ನಡೆದಿತ್ತು. ಪರಿಣಾಮವಾಗಿ ಭಾರತ ಕರ್ನಲ್ ಸೇರಿದಂತೆ 20 ಸೈನಿಕರನ್ನು ಕಳೆದುಕೊಂಡಿತ್ತು. ಆದರೆ, ಚೀನಾ 40 ಸೈನಿಕರನ್ನು ಕಳೆದುಕೊಂಡಿದ್ದರೂ ಕೇವಲ 4 ಎಂದು ಹೇಳಿತ್ತು. ಹೀಗಾಗಿ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.