ಟೀಮ್ ಇಂಡಿಯಾ – ಇಂಗ್ಲೆಂಡ್ ಮೊದಲ ಟೆಸ್ಟ್ – ಅಂತಿಮ 11ರ ಬಳಗದಲ್ಲಿ ಕೆ.ಎಲ್. ರಾಹುಲ್ ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 4ರಿಂದ ಆರಂಭವಾಗಲಿದೆ.
ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆರಾಯನ ಆತಂಕವಿದೆ. ಆದ್ರೂ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ.
ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 3-1ರಿಂದ ಸರಣಿ ಗೆದ್ದುಕೊಂಡಿದೆ. ಆದ್ರೆ ಇಂಗ್ಲೆಂಡ್ ನೆಲದಲ್ಲಿ ಮೂರು ವರ್ಷಗಳ ಹಿಂದೆ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿದೆ.
ಈ ನಡುವೆ ಇಂಗ್ಲೆಂಡ್ ತಂಡ ತವರಿನಲ್ಲಿ ಮತ್ತೆ ಟೀಮ್ ಇಂಡಿಯಾವನ್ನು ಸೋಲಿಸಲು ಸ್ಕೇಚ್ ಹಾಕೊಂಡಿದೆ. ಆದ್ರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಗೆಲ್ಲಲೇಬೇಕು ಅನ್ನೋ ಹಠದಲ್ಲಿದ್ದಾರೆ.
2018ರ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಮಳೆಯನ್ನೇ ಸುರಿಸಿದ್ದಾರೆ. ಆದ್ರೆ ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ನಿರೀಕ್ಷಿತ ರನ್ ಗಳು ಬಂದಿಲ್ಲ.
ಇನ್ನೊಂದೆಡೆ ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತುಕೊಂಡ್ರೂ ಬ್ಯಾಟ್ ನಿಂದ ರನ್ ಗಳು ಸರಾಗವಾಗಿ ರನ್ ಗಳು ಹರಿದು ಬರುತ್ತಿಲ್ಲ. ಮತ್ತೊಂದೆಡೆ ವಿದೇಶಿ ನೆಲದಲ್ಲಿ ಭಾರತದ ಆಧಾರ ಸ್ತಂಭವಾಗಿರುವ ಅಜಿಂಕ್ಯ ರಹಾನೆ ತಂಡಕ್ಕೆ ಆಧಾರವಾಗಲೇಬೇಕು.
ಏತನ್ಮಧ್ಯೆ, ಟೀಮ್ ಇಂಡಿಯಾಗೆ ಆರಂಭಿಕರದ್ದೇ ಸಮಸ್ಯೆಯಾಗಿಬಿಟ್ಟಿದೆ. ರೋಹಿತ್ ಶರ್ಮಾ ಜೊತೆ ಯಾರು ಇನಿಂಗ್ಸ್ ಆರಂಭಿಸ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಶತಕ ದಾಖಲಿಸಿರುವ ಕೆ. ಎಲ್. ರಾಹುಲ್ ಮೊದಲ ಆಯ್ಕೆಯಾಗಲಿದ್ದಾರೆ. ಇನ್ನೊಂದೆಡೆ ಮಯಾಂಕ್ ಅಗರ್ ವಾಲ್ ರೇಸ್ ನಲ್ಲಿದ್ದಾರೆ.
ಇನ್ನುಳಿದಂತೆ ರಿಷಬ್ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಸ್ಪಿನ್ ವಿಭಾಗದ ಅಸ್ತ್ರಗಳಾಗಿದ್ದಾರೆ. ಹಾಗೇ ವೇಗದ ಬೌಲಿಂಗ್ ನಲ್ಲಿ ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ 11ರ ಬಳಗದಲ್ಲೇ ಇರಬೇಕು. ಇನ್ನುಳಿದ ಎರಡು ಸ್ಥಾನಗಳಿಗೆ ಮಹಮ್ಮದ್ ಸಿರಾಜ್, ಇಶಾಂತ್ ಶರ್ಮಾ ಹಾಗೂ ಶಾರ್ದೂಲ್ ಥಾಕೂರ್ ನಡುವೆ ಸ್ಪರ್ಧೆ ನಡೆಯಲಿದೆ.
ಹಾಗೇ ಇಂಗ್ಲೆಂಡ್ ತಂಡಕ್ಕೆ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅಲಭ್ಯತೆ ಕಾಡಲಿದೆ. ಜೊತೆಗೆ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಫಾರ್ಮ್ ಕೂಡ ಸ್ವಲ್ಪ ಮಟ್ಟಿಗೆ ಕಾಡಲಿದೆ. ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಟೀಮ್ ಇಂಡಿಯಾ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಬಹುದು. ಜಾನಿ ಬೇರ್ ಸ್ಟೋವ್ ಮತ್ತು ಜೋಸ್ ಬಟ್ಲರ್ ಅವರ ಅನುಭವ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ರೋರಿ ಬನ್ರ್ಸ್, ಡಾಮ್ ಸಿಬ್ಲಿ, ಝಾಕ್ ಕ್ರಾವ್ಲೇ, ಡಾನ್ ಲಾರೆನ್ಸ್ ಬ್ಯಾಟಿಂಗ್ ವಿಭಾಗದ ಪ್ರಮುಖ ಪಿಲ್ಲರ್ ಗಳು.
ಟೀಮ್ ಇಂಡಿಯಾ ಸಂಭವನೀಯ ತಂಡ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್/ ಮಯಾಂಕ್ ಅಗರ್ ವಾಲ್, ಚೇತೇಶ್ವರ ಪೂಜಾರ, ರಿಷಬ್ ಪಂತ್, ಆರ್. ಅಶ್ವಿನ್, ರವಿಂದ್ರ ಜಡೇಜಾ, ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ, ಮಹಮ್ಮದ್ ಸೀರಾಜ್, ಶಾರ್ದೂಕ್ ಥಾಕೂರ್/ ಇಶಾಂತ್ ಶರ್ಮಾ.
ಇಂಗ್ಲೆಂಡ್ ಸಂಭವನೀಯ ತಂಡ
ಜೋಯ್ ರೂಟ್ (ನಾಯಕ), ರೋರಿ ಬನ್ರ್ಸ್, ಡಾಮ್ ಸಿಬ್ಲಿ, ಝಾಕ್ ಕ್ರಾವ್ಲೆ, ಜಾನಿ ಬೇರ್ ಸ್ಟೋವ್, ಡಾನ್ ಲಾರೆನ್ಸ್, ಜೋಸ್ ಬಟ್ಲರ್, ಒಲೆಯ್ ರಾಬಿನ್ಸನ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.








