ಕುಸಿದ ಭಾರತದ ರಪ್ತು ಮತ್ತು ಆಮದು ಉದ್ಯಮ
ಹೊಸದಿಲ್ಲಿ, ಜೂನ್ 17: ಕೊರೋನಾ ವೈರಸ್ ಉಂಟು ಮಾಡಿರುವ ಬಿಕ್ಕಟ್ಟಿನಿಂದ ಜಾಗತಿಕ ಅರ್ಥಿಕತೆ ಪಾತಾಳಕ್ಕೆ ಕುಸಿದಿದೆ. ವಿಶ್ವದ ಬಲಿಷ್ಟ ದೇಶ ಎನಿಸಿಕೊಂಡ ರಾಷ್ಟ್ರಗಳು ಕೂಡ ಅರ್ಥಿಕತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ.ಕೊರೊನಾ ವೈರಸ್ ಸೋಂಕಿನ ಬಿಕ್ಕಟ್ಟಿನಿಂದ ಭಾರತ ಕೂಡ ಅರ್ಥಿಕ ಕುಸಿತ ಕಂಡಿದ್ದು ಭಾರತದ ರಪ್ತು ಮತ್ತು ಆಮದು ಉದ್ಯಮ ಸಂಕಷ್ಟದಲ್ಲಿದೆ.
ಸೋಮವಾರ ಕೇಂದ್ರದ ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಲಾಕ್ಡೌನ್ ಪರಿಣಾಮದಿಂದ ರಪ್ತು ಮತ್ತು ಆಮದಿನಲ್ಲಿ ತೀವ್ರ ಕುಸಿತ ಕಂಡು ಬಂದಿದೆ.
ಲಾಕ್ ಡೌನ್ ನಿಂದಾಗಿ ಶೇಕಡಾ 36.5% ನಷ್ಟು ರಪ್ತು ಕುಸಿತ ಕಂಡಿದ್ದರೆ, ಆಮದು ಶೇಕಡಾ 51% ನಷ್ಟು ಕುಸಿದಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ತಿಳಿಸಿದೆ. ಇದರಿಂದಾಗಿ ಕೇವಲ ಮೂರು ತಿಂಗಳಲ್ಲಿ ಭಾರತಕ್ಕೆ 3.1 ಬಿಲಿಯನ್ ಡಾಲರ್ ವ್ಯಾಪಾರ ನಷ್ಟವಾಗಿದೆ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.
ಅಕ್ಕಿ, ಮಸಾಲೆಗಳು, ಕಬ್ಬಿಣದ ಅದಿರು, ಔಷಧಗಳು ಮುಂತಾದ ಪ್ರಮುಖ ವಸ್ತುಗಳು ಮಾತ್ರ ಮೇ ತಿಂಗಳಿನ ರಫ್ತಿನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದ್ದರೆ, ಆಮದು ಮಾಡಿಕೊಂಡ ವಸ್ತುಗಳಲ್ಲಿ ಕಬ್ಬಿಣದ ಪೈರೈಟ್ಗಳು, ಯೋಜನಾ ಸರಕುಗಳು ಮೇ ತಿಂಗಳಿನಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಕಂಡಿದೆ. ಇಷ್ಟನ್ನು ಹೊರತು ಪಡಿಸಿ ಇತರ ಎಲ್ಲಾ ಬಗೆಯ ರಫ್ತು ಮತ್ತು ಆಮದು ಉದ್ಯಮಗಳು ಕುಸಿತ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.