ಪಾಕಿಸ್ತಾನ ಈಗ ತೀವ್ರ ಔಷಧ ಕೊರತೆಯ ಸಂಕಷ್ಟ ಎದುರಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವುದರಿಂದ, ಭಾರತದ ಮೇಲೆ ಅವಲಂಬಿತವಾಗಿದ್ದ ಪಾಕಿಸ್ತಾನ ತೀವ್ರವಾದ ಪರಿಣಾಮಕ್ಕೆ ಗುರಿಯಾಗಿದೆ. ವಿಶೇಷವಾಗಿ ಭಾರತದ ಜೆನೆರಿಕ್ ಮೆಡಿಸಿನ್‌ಗಳ ಮೇಲೆ ಪಾಕಿಸ್ತಾನ ಬಹುಪಾಲು ಅವಲಂಬಿತವಾಗಿದ್ದು, ಆ ವ್ಯಾಪಾರ ನಿಂತ ನಂತರ ಅಗತ್ಯ ಕಚ್ಚಾ ವಸ್ತುಗಳು ಪಾಕಿಸ್ತಾನಕ್ಕೆ ತಲುಪದೆ ಔಷಧ ತಯಾರಿಕೆಯಲ್ಲಿ ಅಡಚಣೆ ಉಂಟಾಗಿದೆ.
ಇದರಿಂದ ಹಾವು ಕಡಿತ, ಕ್ಯಾನ್ಸರ್, ಟ್ಯೂಬರ್ಕ್ಯುಲೋಸಿಸ್ (ಕ್ಷಯ), ಹೃದಯ ರೋಗ, ಡಯಾಲಿಸಿಸ್ ಹಾಗೂ ಇತರ ಕಾಯಿಲೆಗಳ ಚಿಕಿತ್ಸೆಗಾಗಿ ಬೇಕಾಗುವ ಔಷಧಗಳು ಲಭ್ಯವಿಲ್ಲದ ಸ್ಥಿತಿ ಉಂಟಾಗಿದೆ. ಈ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಡಾಕ್ಟರ್‌ಗಳು ಸಮಸ್ಯೆ ಎದುರಿಸುತ್ತಿದ್ದು, ಕೆಲವರು ಉದ್ಯೋಗ ತ್ಯಜಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ.
ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ಉತ್ಪಾದನೆಯಾದ ಔಷಧಿಗಳಲ್ಲಿ 60%-70% ಕಚ್ಚಾ ವಸ್ತುಗಳು ಭಾರತದಿಂದ ಆಮದು ಮಾಡಲಾಗುತ್ತಿತ್ತು. ಈಗ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ ಬಳಿಕ, ಅಲ್ಲಿನ ಔಷಧ ಕಂಪನಿಗಳು ತಯಾರಿಕೆಯನ್ನು ಮುಂದುವರೆಸಲು ಸಮರ್ಥವಾಗಿಲ್ಲ.
ಪಾಕಿಸ್ತಾನದ ಆರೋಗ್ಯ ವ್ಯವಸ್ಥೆಗೆ ಈ ಔಷಧ ಕೊರತೆ ದೊಡ್ಡ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ.








