ಟೀಂ ಇಂಡಿಯಾದ ವೇಗದ ಬೌಲಿಂಗ್ ಅಸ್ತ್ರವಾಗಿರುವ ಮೊಹಮ್ಮದ್ ಸಿರಾಜ್, ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದು, ಈ ಬಾರಿ ಆಸ್ಟ್ರೇಲಿಯಾ ವೇಗಿ ಜೋಶ್ ಹೇಜ಼ಲ್ವುಡ್ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಮಹಾಸಮರ ನಾಳೆ(ಅ.5) ಆರಂಭ ಆಗಲಿದ್ದು, ಇದರ ಬೆನ್ನಲ್ಲೇ ಐಸಿಸಿ ಏಕದಿನ ಬೌಲರ್‌ಗಳ
ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಂಡಿದೆ. ಈಗಾಗಲೇ ನಂ.1 ಸ್ಥಾನ ಪಡೆದಿದ್ದ ಸಿರಾಜ್, ತಮ್ಮ ಸ್ಥಾನವನ್ನ ಕಾಯ್ದುಕೊಂಡಿದ್ದರೆ. ಆದರೆ ಈ ಬಾರಿ ಆಸೀಸ್‌ನ ವೇಗದ ಬೌಲರ್ ಜೋಶ್ ಹೇಜ಼ಲ್ವುಡ್ ಅವರೊಂದಿಗೆ ನಂ.1 ಸ್ಥಾನವನ್ನ ಹಂಚಿಕೊಂಡಿದ್ದಾರೆ.
ಭಾರತ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್, 699 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಇವರೊಂದಿಗೆ ನಂ.1 ಸ್ಥಾನಕ್ಕಾಗಿ ತೀವ್ರ ಪೈಪೋಟಿ ನೀಡಿರುವ ಹೇಜ಼ಲ್ವುಡ್, 699 ಪಾಯಿಂಟ್ಸ್ ಪಡೆಯುವ ಮೂಲಕ ಸಿರಾಜ್ ಅವರ ಜೊತೆಗೆ ನಂ.1 ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಸ್ಟಾರ್ ವೇಗದ ಬೌಲರ್‌ಗಳು ನಾಳೆಯಿಂದ ಆರಂಭವಾಗುವ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತಿದ್ದ ಮೊಹಮ್ಮದ್ ಸಿರಾಜ್, ಅತ್ಯುತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಇತ್ತೀಚೆಗೆ ನಡೆದ ಏಷ್ಯಾಕಪ್ ಸೇರಿದಂತೆ ಹಲವು ಸರಣಿಗಳಲ್ಲಿ ಆಕ್ರಮಣಕಾರಿ ಬೌಲಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಉಳಿದಂತೆ ಅಫ್ಘಾನಿಸ್ತಾನ ಸ್ಪಿನ್ ಜೋಡಿ ಮುಜೀಬುರ್ ರೆಹಮಾನ್ ಹಾಗೂ ರಶೀದ್ ಖಾನ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿದ್ದರೆ. ನ್ಯೂಜಿ಼ಲೆಂಡ್‌ನ ಪ್ರಮುಖ ವೇಗದ ಬೌಲರ್ ಟ್ರೆಂಟ್ ಬೌಲ್ಟ್ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್, 616 ಪಾಯಿಂಟ್ಸ್‌ನೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.