ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಜಾಗತಿಕ ವಾಣಿಜ್ಯ ಮತ್ತು ಸುಂಕದ ವಿಚಾರದಲ್ಲಿ ಕಠಿಣ ನಿಲುವುಗಳನ್ನು ತಳೆದಿರುವುದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತದ ಮೇಲೂ ಸುಂಕದ ತೂಗುಗತ್ತಿ ನೇತಾಡುತ್ತಿದೆ. ಆದರೆ ಇದರ ನಡುವೆಯೇ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದರೊಬ್ಬರು ಭಾರತದ ಪರವಾಗಿ ಬ್ಯಾಟ್ ಬೀಸಿದ್ದು, ಪಾಕಿಸ್ತಾನದ ಕೊಡುಗೆಯ ಬಗ್ಗೆ ಖಡಕ್ ಪ್ರಶ್ನೆಗಳನ್ನು ಎತ್ತುವ ಮೂಲಕ ಸುದ್ದಿಯಾಗಿದ್ದಾರೆ.
ಅಮೆರಿಕದ ಕಾಂಗ್ರೆಸ್ ಸದಸ್ಯ ರಿಚ್ ಮೆಕ್‌ಕಾರ್ಮಿಕ್ ಅವರು ನೀಡಿರುವ ಹೇಳಿಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರತ ಮತ್ತು ಪಾಕಿಸ್ತಾನದ ಆರ್ಥಿಕ ನೀತಿಗಳ ನಡುವಿನ ವ್ಯತ್ಯಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಭಾರತ ಕೇವಲ ಪಡೆಯುವ ದೇಶವಲ್ಲ, ನೀಡುವ ದೇಶ
ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ಆಯೋಜಿಸಿದ್ದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಮಾತನಾಡಿದ ಮೆಕ್‌ಕಾರ್ಮಿಕ್, ಭಾರತದ ಆರ್ಥಿಕ ಸಾಮರ್ಥ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಭಾರತ ಇಂದು ಕೇವಲ ಅಮೆರಿಕದಿಂದ ಹೂಡಿಕೆಯನ್ನು ನಿರೀಕ್ಷಿಸುವ ರಾಷ್ಟ್ರವಾಗಿ ಉಳಿದಿಲ್ಲ. ಬದಲಾಗಿ ಅಮೆರಿಕದ ನೆಲದಲ್ಲಿಯೇ ಬಂಡವಾಳ ಹೂಡಿಕೆ ಮಾಡುವ ಮೂಲಕ ಅಮೆರಿಕದ ಆರ್ಥಿಕತೆಗೂ ಶಕ್ತಿ ತುಂಬುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಪಾಕಿಸ್ತಾನದಿಂದ ಅಮೆರಿಕಕ್ಕೆ ಸಿಗುತ್ತಿರುವುದೇನು?
ಭಾರತದ ಬೆಳವಣಿಗೆಯನ್ನು ಉಲ್ಲೇಖಿಸುವ ಭರದಲ್ಲಿ ಮೆಕ್‌ಕಾರ್ಮಿಕ್ ಅವರು ಪಾಕಿಸ್ತಾನದ ಬಗ್ಗೆ ಕಠಿಣವಾದ ಪ್ರಶ್ನೆಯೊಂದನ್ನು ಮುಂದಿಟ್ಟರು. ಪಾಕಿಸ್ತಾನವು ಸುಮಾರು 300 ಮಿಲಿಯನ್ (30 ಕೋಟಿ) ಜನಸಂಖ್ಯೆಯನ್ನು ಹೊಂದಿದೆ. ಆದರೆ ಅಮೆರಿಕಕ್ಕೆ ಅವರಿಂದ ಹೂಡಿಕೆಯ ರೂಪದಲ್ಲಿ ಏನಾದರೂ ಬರುತ್ತಿದೆಯೇ? ಇಲ್ಲ, ಅಲ್ಲಿಂದ ನಮಗೆ ಸಿಗುತ್ತಿರುವ ಆರ್ಥಿಕ ಲಾಭ ಅಥವಾ ಹೂಡಿಕೆ ಅತ್ಯಲ್ಪ ಎಂದು ನೇರವಾಗಿ ಹೇಳಿದರು. ಈ ಮೂಲಕ ಭಾರತವು ಅಮೆರಿಕಕ್ಕೆ ಆಯಕಟ್ಟಿನ ಪಾಲುದಾರನಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಮೋದಿ ಒಬ್ಬ ಸಮರ್ಥ ರಾಷ್ಟ್ರೀಯವಾದಿ
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಆಡಳಿತವರ್ಗದಲ್ಲಿ ಅಸಮಾಧಾನವಿತ್ತು. ಆದರೆ ಇದನ್ನು ಸಮರ್ಥಿಸಿಕೊಂಡ ಮೆಕ್‌ಕಾರ್ಮಿಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಓರ್ವ ರಾಷ್ಟ್ರೀಯವಾದಿ ನಾಯಕ ಎಂದು ಬಣ್ಣಿಸಿದರು. ಭಾರತವು ತನ್ನ ಆರ್ಥಿಕತೆಯನ್ನು ವಿಸ್ತರಿಸಲು ಮತ್ತು ಜನರಿಗೆ ಅಗ್ಗದ ದರದಲ್ಲಿ ಇಂಧನ ಒದಗಿಸಲು ರಷ್ಯಾದಿಂದ ತೈಲ ಖರೀದಿಸುತ್ತಿದೆ. ಇದು ಅವರ ದೇಶದ ಹಿತಾಸಕ್ತಿಯಾಗಿದೆ. ಈ ಕಾರಣಕ್ಕಾಗಿ ಭಾರತದ ವಿರುದ್ಧ ದ್ವೇಷದ ರಾಜಕಾರಣ ಮಾಡುವುದು ಅಥವಾ ಭಾರತವನ್ನು ದೂರವಿಡುವುದು ಅಮೆರಿಕಕ್ಕೆ ದೊಡ್ಡ ಹೊಡೆತವಾಗಲಿದೆ ಎಂದು ಎಚ್ಚರಿಸಿದರು.
ಟ್ರಂಪ್ ನೀತಿಗೆ ಪರೋಕ್ಷ ಟೀಕೆ
ತಮ್ಮದೇ ಪಕ್ಷದ ನಾಯಕರಾಗಿದ್ದರೂ, ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಹೇರಲು ಉದ್ದೇಶಿಸಿರುವ ಸುಂಕದ ಬೆದರಿಕೆಗಳ ಬಗ್ಗೆ ಮೆಕ್‌ಕಾರ್ಮಿಕ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಮಿತ್ರ ರಾಷ್ಟ್ರವಾಗಿರುವ ಭಾರತದಂತಹ ಪ್ರಬಲ ಆರ್ಥಿಕತೆಯೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಅವರನ್ನು ದೂರ ಮಾಡಿಕೊಂಡರೆ ದೀರ್ಘಕಾಲೀನವಾಗಿ ನಮಗೇ ನಷ್ಟವಾಗಲಿದೆ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ಒಟ್ಟಾರೆಯಾಗಿ, ಅಮೆರಿಕದ ನೆಲದಲ್ಲಿ ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹೂಡಿಕೆ ಮತ್ತು ಆರ್ಥಿಕ ಶಕ್ತಿ ಎಷ್ಟು ಪ್ರಬಲವಾಗಿದೆ ಎಂಬುದು ಈ ಹೇಳಿಕೆಯಿಂದ ಮತ್ತೊಮ್ಮೆ ಸಾಬೀತಾಗಿದೆ.








