ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಜವಾಬ್ದಾರಿಯುತ ರಾಷ್ಟ್ರ
ಜಿನೀವಾ, ಜುಲೈ 8: ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಜವಾಬ್ದಾರಿಯುತ ರಾಷ್ಟ್ರವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಗಮನ ಹರಿಸಬಹುದು ಎಂದು ವಿಶ್ವ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
2021 ರ ಜನವರಿಯಲ್ಲಿ ಪ್ರಾರಂಭವಾಗಲಿರುವ ಎರಡು ವರ್ಷಗಳ ಅವಧಿಗೆ ಕಳೆದ ತಿಂಗಳು ಖಾಯಂ ಸದಸ್ಯರಾಗಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ಗೆ ನಡೆದ ಚುನಾವಣೆಯಲ್ಲಿ ಭಾರತ ಬಹುಮತದಿಂದ ಗೆದ್ದಿದೆ.

ಯುಎನ್ ಜನರಲ್ ಅಸೆಂಬ್ಲಿಯಲ್ಲಿ ದಾಖಲಾದ 192 ಮತಪತ್ರಗಳಲ್ಲಿ ಭಾರತ 184 ಮತಗಳನ್ನು ಗಳಿಸಿದೆ.
ತಂತ್ರಜ್ಞಾನದ ವಿಷಯದಲ್ಲಿ, ಜನರ ವಿಷಯದಲ್ಲಿ, ವಿಚಾರಗಳ ವಿಷಯದಲ್ಲಿ ಭಾರತವು ವಿಶ್ವದ ಅತ್ಯಂತ ಪ್ರಮುಖ ದೇಶವಾಗಿದೆ. ಭಾರತ ಇತರೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೂಡ ಅತ್ಯಂತ ಪ್ರಬಲ ಸದಸ್ಯ ರಾಷ್ಟ್ರವಾಗಿದ್ದು, ಚರ್ಚೆಗಳಲ್ಲಿ ಸಹಕರಿಸಲು ಆ ಸಂಸ್ಥೆಗಳ ಸೂಕ್ಷ್ಮತೆಗಳು ನೆರವಾಗಬಹುದು ಎಂದು ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಅಧ್ಯಕ್ಷ ಟಿಜ್ಜಾನಿ ಮುಹಮ್ಮದ್-ಬಾಂಡೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮುಂದಿನ ವರ್ಷ ಭದ್ರತಾ ಮಂಡಳಿಯಲ್ಲಿ ಕುಳಿತುಕೊಳ್ಳಲು ಸಿದ್ಧತೆ ನಡೆಸುತ್ತಿರುವಾಗ ಭಾರತದ ಬಗ್ಗೆಗಿನ ನಿರೀಕ್ಷೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತವು ತನ್ನದೇ ದೇಶದಲ್ಲಿ ಮಾತ್ರವಲ್ಲದೆ ಬೇರೆಡೆ ದೇಶಗಳಿಂದ ಕೂಡ ಹೆಚ್ಚಿನ ಬೆಂಬಲವನ್ನು ಪಡೆದಿದೆ. ಕಾಮನ್‌ವೆಲ್ತ್, ಅಲಿಪ್ತ ರಾಷ್ಟ್ರಗಳ ಒಕ್ಕೂಟ, ಜಿ77 ಮುಂತಾದವುಗಳಲ್ಲೂ ಜವಾಬ್ದಾರಿಯುತವಾಗಿ ನಡೆದು ಕೊಂಡಿದೆ. ಆದ್ದರಿಂದ, ಭಾರತ ಅಭಿವೃದ್ಧಿಯ ಗುರಿಗಳ ಕಡೆಗೆ ಗಮನವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.
ಕೈಗೆಟುಕುವ ದರದಲ್ಲಿ ಔಷಧಿಗಳು ಮತ್ತು ಲಸಿಕೆಗಳಿಗೆ ಸಂಬಂಧಿಸಿದಂತೆ ಭಾರತವು ಯಾವ ಪಾತ್ರವನ್ನು ವಹಿಸುತ್ತದೆ ಎಂಬ ಪ್ರಶ್ನೆಗೆ, ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತವು ಅದರ ನೆರೆಹೊರೆಯ ರಾಷ್ಟ್ರಗಳಿಗೆ ನೆರವನ್ನು ನೀಡಿದೆ. ಕೊರೊನಾಗೆ ಲಸಿಕೆ ತಯಾರಿಸುವ ನಿಟ್ಟಿನಲ್ಲೂ ಭಾರತ ವಿಶ್ವಸಂಸ್ಥೆಗೆ ನೆರವಾಗಬಲ್ಲದು ಎಂದು ಹೇಳಿದರು.







