ವಿಶ್ವದ ಟಾಪ್ 10 ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಈಗ ನಾಲ್ಕನೇ ಸ್ಥಾನ

ಹೊಸದಿಲ್ಲಿ, ಜೂನ್ 12: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 2.92 ಲಕ್ಷಕ್ಕಿಂತಲೂ ಹೆಚ್ಚಿನ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇತ್ತ ಕೊರೋನಾ ಸೋಂಕಿತರ ಸಂಖ್ಯೆ ಮೂರು ಲಕ್ಷಕ್ಕೆ ಹತ್ತಿರವಾಗುತ್ತಿದ್ದಂತೆ, ವಿಶ್ವದ ಟಾಪ್ 10 ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ನನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.
ಇಲ್ಲಿಯವರೆಗೆ ಭಾರತದಲ್ಲಿ ದಾಖಲಾಗಿರುವ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,93,754ಕ್ಕೆ ಏರಿಕೆಯಾಗಿದ್ದು, ಬ್ರಿಟನ್ ನಲ್ಲಿ ಇಲ್ಲಿಯವರೆಗಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,91,588.
ಕೊರೋನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿ 20.464 ಲಕ್ಷ ಕೊರೊನಾ ಪ್ರಕರಣ ದಾಖಲಾಗಿರುವ ಅಮೆರಿಕವಿದ್ದರೆ, 7.72 ಲಕ್ಷ ಸೋಂಕಿತರನ್ನು ಹೊಂದಿರುವ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 4.93 ಲಕ್ಷ ಸೋಂಕಿತರನ್ನು ಹೊಂದಿರುವ ರಷ್ಯಾ ಇದೆ. ಭಾರತ ನಾಲ್ಕನೇ ಸ್ಥಾನದಲ್ಲಿದ್ದರೆ, 2,91,588 ಲಕ್ಷ ಪ್ರಕರಣ ದಾಖಲಾಗಿರುವ ಬ್ರಿಟನ್ ಐದನೇ ಸ್ಥಾನದಲ್ಲಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 9.996 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ ಕೊರೊನಾದಿಂದ 8,102 ಮಂದಿ ಸಾವನ್ನಪ್ಪಿದ್ದಾರೆ.








