ಭಾರತ ಯಾವುದೇ ದೇಶದೊಂದಿಗೆ ಯುದ್ಧ ಬಯಸುವುದಿಲ್ಲ – ರಕ್ಷಣಾ ಸಚಿವ ರಾಜನಾಥ್ ಸಿಂಗ್
ಭಾರತ ಎಂದಿಗೂ ಯಾವುದೇ ದೇಶದೊಂದಿಗೆ ಯುದ್ಧವನ್ನು ಬಯಸುವುದಿಲ್ಲ ಮತ್ತು ಇಲ್ಲಿಯವರೆಗೆ ಯಾವುದೇ ದೇಶದ ಭೂಮಿಯನ್ನು ಅತಿಕ್ರಮಿಸಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ಇಂದು ನಡೆದ ಜಂಟಿ ಸಿವಿಲ್-ಮಿಲಿಟರಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಭಾರತವು ‘ವಸುಧೈವ ಕುಟುಂಬಕಂ’ ಎಂಬ ಮನೋಭಾವವನ್ನು ನಂಬುತ್ತದೆ. ಆದರೆ, ದೇಶದ ಗಡಿಯನ್ನು ರಕ್ಷಿಸಲು ಭಾರತೀಯ ಪಡೆಗಳು ಸದಾ ಸಿದ್ಧವಾಗಿರುತ್ತವೆ ಎಂದು ತಿಳಿಸಿದರು.
ರಕ್ಷಣಾ ಸಾಧನಗಳನ್ನು ಹೆಚ್ಚಾಗಿ ದೇಶದಲ್ಲಿಯೇ ತಯಾರಿಸಲಾಗುತ್ತಿದೆ. ಭವಿಷ್ಯದಲ್ಲಿ, ರಕ್ಷಣಾ ಸಾಧನಗಳನ್ನು ಪಡೆಯಲು ಭಾರತವು ಇತರ ದೇಶಗಳನ್ನು ಅವಲಂಬಿಸಬೇಕಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ ಫಲ ಸಮಾಜದ ಎಲ್ಲ ವರ್ಗದವರಿಗೂ ತಲುಪುತ್ತಿದೆ ಎಂದು ತಿಳಿಸಿದರು.