ಹೊಸದಿಲ್ಲಿ, ಜೂನ್ 6: ಲಡಾಖ್ ಗಡಿಯಲ್ಲಿ ಉಂಟಾಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಇಂದು ಭಾರತ- ಚೀನಾ ರಾಷ್ಟ್ರಗಳ ನಡುವೆ ಸೇನಾಸಭೆ ಲೆಫ್ಟಿನೆಂಟ್ ಜನರಲ್ ಲೆವಲ್ನ ಸೇನಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಲಿದೆ.
ಇವತ್ತು ಬೆಳಗ್ಗೆ ಸುಮಾರು 7.30 ರಿಂದ ಸಭೆಯ ಪ್ರಕ್ರಿಯೆಗಳು ಆರಂಭವಾಗಿ, ಸುಮಾರು 8 ಗಂಟೆಯ ಹೊತ್ತಿಗೆ ಸೇನೆಗಳ ರೀತಿ ರಿವಾಜುಗಳ ಅನುಸಾರದಂತೆ ಸಭೆ ಆರಂಭಗೊಂಡಿದೆ. ಮಾತುಕತೆಗೆ ಆಹ್ವಾನಿಸಿದ್ದ ಚೀನಾದ ಬದಿಯಲ್ಲಿರುವ ಮೊಲ್ಡೊ ಪ್ರದೇಶದಲ್ಲಿರುವ ಪರ್ಸನಲ್ ಮೀಟಿಂಗ್ ಹಟ್ನಲ್ಲಿ ಸಭೆ ನಡೆಯುತ್ತಲಿದ್ದು, ಪೂರ್ವ ಲಡಾಖ್‌ನ ಚುಶುಲ್- ಮೊಲ್ಡೊ ಗಡಿಯ ಬಿಪಿಎಂ ಪಾಯಿಂಟ್‌ನಲ್ಲಿ ಭಾರತೀಯ ಸೇನಾ ಪ್ರತಿನಿಧಿಯಾಗಿ ಲೆ| ಜ| ಹರಿಂದರ್ ಸಿಂಗ್ ಅವರು ಚೀನದ ಸೇನಾ ಕಮಾಂಡರ್ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ.

ಭಾರತ ಚೀನಾ ದೇಶಗಳ ಲೆಫ್ಟಿನೆಂಟ್ ಜನರಲ್‌ಗಳ ಸಭೆಗೆ ಭಾರತ ಶಾಂತಿಯ ಸಂದೇಶ ಮತ್ತು ನಾಲ್ಕು ದಿಟ್ಟ ಷರತ್ತುಗಳೊಂದಿಗೆ ಸಜ್ಜಾಗಿದೆ.
1. ಎಲ್ಎಸಿಯ ಪ್ರಮುಖ ನಾಲ್ಕೈದು ಸ್ಥಳಗಳಲ್ಲಿ ಜಮಾವಣೆಯಾಗಿರುವ ಸೈನಿಕರನ್ನು ಚೀನ ಹಿಂದಕ್ಕೆ ಕರೆಯಿಸಿಕೊಳ್ಳಬೇಕು.
2. ‘ಫಿಂಗರ್ 4’ ವಲಯದವರೆಗೆ ಬಂದಿರುವ ಚೀನ ಅಲ್ಲಿಂದ ಹಿಂದೆ ಸರಿಯಬೇಕು.
3.ಚೀನ ಎಲ್‌ಎಸಿಯ ಬದಿಯಲ್ಲಿ ಮೂಲ ಸೌಕರ್ಯ ಯೋಜನೆಗಳಿಗೆ ಯಾವುದೇ ತಕರಾರು ಎತ್ತುವಂತಿಲ್ಲ.
4. ಚೀನೀ ಸೈನಿಕರು ಸಂಯಮದಿಂದ ಗಡಿ ನಿಯಮಗಳನ್ನು ಪಾಲಿಸಿಕೊಂಡು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು.








