ಹೊಸದಿಲ್ಲಿ, ಜೂನ್ 6 : ಚೀನಾ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತದೆ. ಆದರೆ ಭಾರತ ಅಂತಾರಾಷ್ಟ್ರೀಯ ಗಡಿಯಲ್ಲಿ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವುದಕ್ಕೆ ಸಿದ್ಧವಿಲ್ಲ ಎಂದು ಚೀನಾದ ದಿನಪತ್ರಿಕೆಯ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ದಿನಪತ್ರಿಕೆಯ ಸಂಪಾದಕೀಯದಲ್ಲಿ ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಲ್ಲೇಖವಿದ್ದು, ಚೀನಾವು ಭಾರತದ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಬಯಸುತ್ತದೆ. ಯಾವುದೇ ಕಾರಣಕ್ಕೂ ಚೀನಾವು ಭಾರತದ ಜೊತೆಗೆ ಶತ್ರುತ್ವವನ್ನು ಬಯಸುವುದಿಲ್ಲ ಬದಲಾಗಿ ಸಹೋದರತೆಯ ಸಂಬಂಧವನ್ನು ಎದುರು ನೋಡುತ್ತದೆ ಎಂದು ಬರೆಯಲಾಗಿದೆ.
ಭಾರತವು ಲಡಾಕ್ ವಿಚಾರದಲ್ಲಿ ಅಮೆರಿಕಾ ಬೆಂಬಲವಿದೆ ಎಂದು ಅದನ್ನು ನೆಚ್ಚಿಕೊಂಡು ಕೂತಿದೆ. ಆದರೆ ಬೆಂಬಲ ನೀಡುವ ನೆಪದಲ್ಲಿ ಅಮೆರಿಕಾವು ಭಾರತವನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ದಿನಪತ್ರಿಕೆಯ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಅಂತಾರಾಷ್ಟ್ರೀಯ ಗಡಿ ವಿಚಾರದಲ್ಲಿ ಭಾರತದ ಮೇಲೆ ಬಿದ್ದು, ಭಾರತದ ಶತ್ರುತ್ವ ಕಟ್ಟಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ. ಚೀನಾವು ಕಳೆದ ಹಲವು ದಶಕಗಳಿಂದ ನೆರೆಹೊರೆಯ ದೇಶಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದು, ಅದನ್ನು ರಾಜನೀತಿ ಎಂದು ಚೀನಾ ತಿಳಿದಿದೆ. ಗಡಿ ವಿವಾದಗಳು ಎದುರಾದಾಗ ಶಾಂತಿಯುತ ರೀತಿಯಲ್ಲಿ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಚೀನಾ ಇಷ್ಟಪಡುತ್ತದೆಯೇ ಹೊರತು ಭಾರತದ ಜೊತೆಗೆ ಶತ್ರುತ್ವ ಬೆಳೆಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ ಎಂದು ದಿನಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಆದರೆ ಯಾವುದೇ ಕಾರಣಕ್ಕೂ ಚೀನಾ ಒಂದು ಇಂಚು ಜಾಗವನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಒಂದೊಮ್ಮೆ ಭಾರತವು ರಾಜತಾಂತ್ರಿಕ ತಪ್ಪು ನಡೆಯನ್ನು ತೋರಿಸಿದರೆ ಚೀನಾ ಅದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ತಯಾರಿಲ್ಲ. ಭಾರತ ಅದಕ್ಕೆ ಪ್ರತಿಯಾಗಿ ಚೀನಾದ ಬಲವಾದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಚೀನಾ ಸೇನೆ ಯಾವುದೇ ಕಾರ್ಯಚರಣೆ ನಡೆಸುತ್ತಿಲ್ಲ ಎಂದು ಭಾರತದ ಗಮನಕ್ಕೆ ಬಂದಿದೆ ಮತ್ತು ಭಾರತ ಕೂಡ ಚೀನಾದ ಶಾಂತಿಯುತ ಸಹಕಾರವನ್ನು ಬಯಸುತ್ತದೆ ಎಂದು ಭಾವಿಸಿರುವುದಾಗಿ ಸಂಪಾದಕೀಯದಲ್ಲಿ ಹೇಳಲಾಗಿದೆ.








