ಭಾರತ – ಶ್ರೀಲಂಕಾ ಮೂರನೇ ಏಕದಿನ ಪಂದ್ಯ – ಟೀಮ್ ಇಂಡಿಯಾದ 11ರ ಬಳಗದಲ್ಲಿ ಹೊಸಬರಿಗೆ ಚಾನ್ಸ್.. ?
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯ ಇಂದು (ಜುಲೈ 23ರಂದು) ನಡೆಯಲಿದೆ. ಕೊಲೊಂಬೊದ ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯ ಶಿಖರ್ ಧವನ್ ಬಳಗಕ್ಕೆ ಔಪಚಾರಿಕ ಪಂದ್ಯವಾದ್ರೆ, ಶ್ರೀಲಂಕಾಗೆ ತವರಿನಲ್ಲಿ ಮರ್ಯಾದೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಶ್ರೀಲಂಕಾ ಸತತ ಎರಡು ಪಂದ್ಯಗಳ ಸೋಲಿನಿಂದ ಹೊರಬಂದಿಲ್ಲ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ಲಂಕಾ ತಂಡ ಆಘಾತವನ್ನೇ ಅನುಭವಿಸಿದೆ. ಯುವ ಆಟಗಾರರನ್ನೊಳಗೊಂಡಿರುವ ಲಂಕಾ ತಂಡದಲ್ಲಿ ಪ್ರತಿಭಾವಂತರೂ ಇದ್ರೂ ಕೂಡ ಅನುಭವದ ಕೊರತೆ ಕಾಡುತ್ತಿದೆ. ಹೀಗಾಗಿ ಸಿಂಹಳಿಯರು ಗೆಲುವಿನ ನಗೆ ಬೀರಲು ವಿಫಲರಾಗುತ್ತಿದ್ದಾರೆ.
ಇನ್ನೊಂದೆಡೆ ಟೀಮ್ ಇಂಡಿಯಾ ಈಗಾಗಲೇ ಏಕದಿನ ಸರಣಿಯಲ್ಲಿ 2-ಂಯಿಂದ ಮುನ್ನಡೆಯಲ್ಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದೊಳಗೆ ಹೊಸ ಮುಖಗಳಿಗೆ ಕೋಚ್ ರಾಹುಲ್ ದ್ರಾವಿಡ್ ಅವಕಾಶ ನೀಡ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.
ಶಿಖರ್ ಧವನ್, ಭುವನೇಶ್ವರ್ ಕುಮಾರ್ 11ರ ಬಳಗದಲ್ಲಿ ಫಿಕ್ಸ್. ಇನ್ನು ಪೃಥ್ವಿ ಶಾ ಗೆ ಅವಕಾಶ ಕೊಟ್ರೆ ದೇವದತ್ ಪಡಿಕ್ಕಲ್ ಮತ್ತು ರುತುರಾಜ್ ಗಾಯಕ್ವಾಡ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತೆ.
ಇನ್ನು ಸಂಜು ಸಾಮ್ಸನ್ ಫಿಟ್ ಆಗಿದ್ರೆ ಇಶಾನ್ ಕಿಶಾನ್ ಸ್ಥಾನದಲ್ಲಿ ಆಡುವ ಸಾಧ್ಯತೆಗಳಿವೆ. ಇನ್ನೊಂದೆಡೆ ಮನೀಷ್ ಪಾಂಡೆ ಜಗದಲ್ಲಿ ನಿತೇಶ್ ರಾಣಾಗೆ ಅವಕಾಶ ಸಿಕ್ಕರೂ ಅಚ್ಚರಿ ಏನಿಲ್ಲ.
ಆರಂಭಿಕನಾಗಿ ಧವನ್ ಜೊತೆ ಪೃಥ್ವಿ ಶಾ ಕಣಕ್ಕಿಳಿದು, ಮೂರು, ನಾಲ್ಕು ಮತ್ತು ಐದನೇ ಕ್ರಮಾಂಕಗಳಲ್ಲಿ ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ನಿತೇಶ್ ರಾಣಾ ಗೆ ಅವಕಾಶ ಸಿಗುವ ಸಾಧ್ಯತೆಗಳೂ ಇವೆ.
ಇನ್ನು ಹಾರ್ದಿಕ್ ಪಾಂಡ್ಯ ಕಳೆದ ಎರಡು ಪಂದ್ಯಗಳಲ್ಲೂ ನಿರೀಕ್ಷಿತ ಆಟವನ್ನಾಡಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಅವಕಾಶ ಸಿಗಬಹುದು. ಆದ್ರೆ ಕೃನಾಲ್ ಪಾಂಡ್ಯ ಎರಡು ಪಂದ್ಯಗಳಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ಹೀಗಾಗಿ ಕೃನಾಲ್ ಪಾಂಡ್ಯಗೆ ವಿಶ್ರಾಂತಿ ನೀಡಿ ಕೆ.ಗೌತಮ್ ಗೆ ಅವಕಾಶ ಸಿಕ್ರೂ ಸಿಗಬಹುದು.
ಹಾಗೇ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಗೆ ವಿಶ್ರಾಂತಿ ನೀಡಿ ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಾಹರ್ ಅವರನ್ನು ಹನ್ನೊಂದರ ಬಳಗದಲ್ಲಿ ನೋಡಿದ್ರೂ ಅಚ್ಚರಿ ಏನಿಲ್ಲ.
ಈ ನಡುವೆ, ಕಳೆದ ಪಂದ್ಯದ ಹೀರೋ ದೀಪಕ್ ಚಾಹರ್ ಬದಲು ನವದೀಪ್ ಸೈನಿ ಅಥವಾ ಚೇತನ್ ಸಕಾರಿಯಾಗೆ ಚಾನ್ಸ್ ಸಿಗುವ ಸಾಧ್ಯತೆಗಳೂ ಇವೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಮೂರನೇ ಏಕದಿನ ಪಂದ್ಯದ ಅಂತಿಮ 11ರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳುತ್ತಾರೋ ಅನ್ನೋ ಕುತೂಹಲವಿದೆ, ಕೋಚ್ ರಾಹುಲ್ ದ್ರಾವಿಡ್ ನುಡಿದಂತೆ ನಡೆಯುತ್ತಾರೋ ಅಥವಾ ಪ್ರಯೋಗಕ್ಕೆ ಮುಂದಾಗದೇ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಚಿತ್ತವನ್ನಿಡುತ್ತಾರೋ.. ?