ಭಾರತ -ಇಂಗ್ಲೆಂಡ್ 2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ..!
ಚೆನ್ನೈ ನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಗೊಂಡಿದೆ. ಅಲ್ಲದೆ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಪ್ರವೇಶಿಸುವ ಕನಸು ನನಸಾಗುವ ಹಾದಿಯಲ್ಲಿದೆ.
ಆರ್. ಅಶ್ವಿನ್ ಅವರ ಶತಕದೊಂದಿಗೆ ಆಲ್ ರೌಂಡ್ ಆಟ, ರೋಹಿತ್ ಶರ್ಮಾ ಅವರ ಭರ್ಜರಿ ಶತಕ, ಅಜಿಂಕ್ಯಾ ರಹಾನೆ ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿಯವರ ಆಕರ್ಷಕ ಅರ್ಧಶತಕಗಳು, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮಿಂಚು ಹರಿಸಿದ್ದ ಅಕ್ಸರ್ ಪಟೇಲ್.. ಹೀಗೆ ಹೊಂದಾಣಿಕೆಯ ಆಟವನ್ನಾಡಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದೆ.
ಹಾಗೇ ನೋಡಿದ್ರೆ ಪಂದ್ಯದ ನಾಲ್ಕನೇ ದಿನ ಇಂಗ್ಲೆಂಡ್ ಸೋಲುವುದು ಖಚಿತವಾಗಿತ್ತು. ಯಾಕಂದ್ರೆ ಮೂರನೇ ದಿನವೇ ಟೀಮ್ ಇಂಡಿಯಾ ಗೆಲುವಿಗೆ ಮುನ್ನುಡಿ ಬರೆದಿತ್ತು.
ಮೂರು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯೊಂದಿಗೆ ನಾಲ್ಕನೇ ದಿನದ ಆಟ ಆರಂಭಿಸಿದ್ದ ಇಂಗ್ಲೆಂಡ್ ಗೆ ಜಾಯ್ ರೂಟ್ ಮತ್ತು ಡೇನಿಯಲ್ ಲಾರೆನ್ಸ್ ಆಸರೆಯಾಗುತ್ತಾರೆ ಅನ್ನೋ ನಿರೀಕ್ಷೆಯನ್ನು ಅಶ್ವಿನ್ ಹುಸಿಗೊಳಿಸಿದ್ರು.
ಪಕ್ಕಾ ಮಾಸ್ಟರ್ ಪ್ಲಾನ್ ಮಾಡಿಕೊಂಡು ಬೌಲಿಂಗ್ ಮಾಡುತ್ತಿದ್ದ ಅಶ್ವಿನ್ ವಿಕೆಟ್ ಕೀಪರ್ ರಿಷಬ್ ಪಂತ್ ಜೊತೆ ತನ್ನ ಯೋಜನೆ ಎಂಬುದನ್ನು ಹಂಚಿಕೊಂಡಿದ್ದರು. ಅದಕ್ಕೆ ತಕ್ಕಂತೆ ಪಂತ್ ಕೂಡ ರೆಡಿಯಾಗಿದ್ದರು. ಮುಂದಿನ ಎಸೆತದಲ್ಲಿ ಡೇನಿಯಲ್ ಲಾರೆನ್ಸ್ ಅವರ ಬ್ಯಾಟಿಂಗ್ ಲಯವನ್ನು ಬುಡಮೇಲು ಮಾಡಿದ ಅಶ್ವಿನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ್ರು. ಪಂತ್ ಅವರು ಅದ್ಭುತ ಸ್ಪಂಪಿಂಗ್ ಮಾಡುವ ಮೂಲಕ ಲಾರೆನ್ಸ್ 26 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿಯಬೇಕಾಯ್ತು.
ಬಳಿಕ ಜಾಯ್ ರೂಟ್ ಜೊತೆ ಸೇರಿಕೊಂಡ ಬೆನ್ ಸ್ಟೋಕ್ಸ್ ತಾಳ್ಮೆಯ ಆಟವನ್ನಾಡಿದ್ರು. ಆದ್ರೆ ಸ್ಟೋಕ್ಸ್ 50 ಎಸೆತಗಳಲ್ಲಿ ಎಂಟು ರನ್ ಗಳಿಸಿದ್ದಾಗ ಅಶ್ವಿನ್ ಅವರ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದ್ರು.
ಹಾಗೇ ಒಲಿವ್ ಪೊಪ್ 12 ರನ್ ಗಳಿಸಿ ಅಕ್ಸರ್ ಪಟೇಲ್ ಗೆ ಬಲಿಯಾದ್ರೆ, ಬೆನ್ ಫೋಕ್ಸ್ 2 ರನ್ ಗಳಿಸಿ ಕುಲದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದ್ರು.
ಈ ನಡುವೆ ತಾಳ್ಮೆಯ ಆಟವಾಡುತ್ತಿದ್ದ ಇಂಗ್ಲೆಂಡ್ ತಂಡದ ರನ್ ಮೇಷಿನ್ ಜಾಯ್ ರೂಟ್ (33ರನ್) ಗೆ ಅಕ್ಸರ್ ಪಟೇಲ್ ಪೆವಿಲಿಯನ್ ದಾರಿ ತೋರಿಸಿದ್ರು. ಅಲ್ಲದೆ ಖಾತೆ ತೆರೆಯುವ ಮುನ್ನವೇ ಒಲಿಯ್ ಸ್ಟೋನ್ ಅವರನ್ನು ಅಕ್ಸರ್ ಎಲ್ ಬಿ ಬಲೆಗೆ ಬೀಳಿಸಿದ್ರು.
ಸೋಲಿನ ದವಡೆಗೆ ಸಿಲುಕಿದ್ರೂ ಮೋಯಿನ್ ಆಲಿ ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ರು. 17 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಐದು ಸಿಕ್ಸರ್ ಗಳನ್ನು ಸಿಡಿಸಿ 43 ರನ್ ಗಳಿಸಿದ್ದರು. ಈ ಹಂತದಲ್ಲಿ ಮೋಯಿನ್ ಅವರು ಕುಲದೀಪ್ ಎಸೆತದಲ್ಲೇ ಸ್ಟಂಪ್ ಔಟಾದ್ರು.
ಅಂತಿಮವಾಗಿ ಇಂಗ್ಲೆಂಡ್ ತಂಡ 164 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 134 ರನ್ ಗಳಿಸಿತ್ತು.
ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 329 ರನ್ ಗಳಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ 286 ರನ್ ದಾಖಲಿಸಿತ್ತು.
ಟೀಮ್ ಇಂಡಿಯಾ ಪರ ಅಕ್ಸರ್ ಪಟೇಲ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಏಳು ವಿಕೆಟ್ ಪಡೆದ್ರು. ಅಲ್ಲದೆ ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗಳ ಗೊಂಚಲು ಪಡೆದ ಹೆಗ್ಗಳಿಕೆಗೆ ಪಾತ್ರರಾದ್ರು. ಕುಲದೀಪ್ ಯಾದವ್ ಎರಡು ವಿಕೆಟ್ ಪಡೆದ್ರು.
ಆರ್. ಅಶ್ವಿನ್ ಎರಡನೇ ಇನಿಂಗ್ಸ್ ನಲ್ಲಿ ಆಕರ್ಷಕ ಶತಕ ಹಾಗೂ ಒಟ್ಟು ಎಂಟು ವಿಕೆಟ್ ಪಡೆದು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








