ಒಂದು ರಾಷ್ಟ್ರ.. ಎರಡು ತಂಡ.. ಇದು ಟೀಮ್ ಇಂಡಿಯಾದ ಹೊಸ ಪರಿಕಲ್ಪನೆ…!
ವಿಶ್ವ ಕ್ರಿಕೆಟ್ ನಲ್ಲಿ ಭಾರತ ಮತ್ತೊಂದು ಇತಿಹಾಸ ಬರೆಯಲಿದೆ. ಒಂದು ರಾಷ್ಟ್ರ- ಎರಡು ದೇಶಗಳ ವಿರುದ್ಧ ಒಂದೇ ಸಮಯದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡುವ ಮೂಲಕ ವಿಶ್ವ ಕ್ರಿಕೆಟ್ ನ ಹೊಸ ಪರಿಕಲ್ಪನೆಗೆ ಮುನ್ನುಡಿ ಬರೆಯಲಿದೆ.
ಹೌದು, ಇಲ್ಲಿಯವರೆಗೆ ಒಂದು ದೇಶದ ಒಂದು ತಂಡ ಮಾತ್ರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿತ್ತು. ಇದೀಗ ಆ ಸಂಪ್ರದಾಯವನ್ನು ಟೀಮ್ ಇಂಡಿಯಾ ಮುರಿಯಲಿದೆ. ಭಾರತ ಕ್ರಿಕೆಟ್ ತಂಡ ಒಂದು ತಂಡವಲ್ಲ. ಎರಡು ತಂಡವಾಗಲಿದೆ.
ಇದು ಅಚ್ಚರಿಯಾದ್ರೂ ಸತ್ಯ. ಆದ್ರೆ ಬಿಸಿಸಿಐ ಈ ಬಗ್ಗೆ ಸ್ಪಷ್ಟತೆಯನ್ನು ನೀಡಿಲ್ಲ.. ಆದ್ರೆ ಖಾಸಗಿ ವಾಹಿನಿ ಸೋನಿ ಸ್ಪೋಟ್ರ್ಸ್ ಟೀಮ್ ಈ ವಿಚಾರವನ್ನು ಬಹಿರಂಗಪಡಿಸಿದೆ.
ಮುಂದಿನ ಜುಲೈ ತಿಂಗಳಿನಲ್ಲಿ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ತಲಾ ಮೂರು ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳ ಸರಣಿ ನಡೆಯಲಿದೆ. ಜುಲೈ 13, 16 ಮತ್ತು 18ರಂದು ಏಕದಿನ ಪಂದ್ಯಗಳು ನಡೆದ್ರೆ, ಜುಲೈ 21, 23 ಮತ್ತು 25ರಂದು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ ಎಂದು ಸೋನಿ ಸ್ಪೋಟ್ರ್ಸ್ ಟೀಮ್ ಸಾಮಾಜಿಕ ಜಾಲ ತಾಣದಲ್ಲಿ ಹೇಳಿಕೊಂಡಿದೆ.
ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗೆ ರೆಡಿಯಾಗುತ್ತಿದೆ. ಆಗಸ್ಟ್ 4ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಆದ್ರೆ ಶ್ರೀಲಂಕಾ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧ ಒಂದೇ ಸಮಯದಲ್ಲಿ ಆಡುತ್ತಿಲ್ಲ. ಬದಲಾಗಿ ಬೇರೆ ಬೇರೆ ತಂಡಗಳು ಆಡುತ್ತಿವೆ.
ಇಲ್ಲಿ ಟೀಮ್ ಇಂಡಿಯಾದ ಖಾಯಂ ಆಟಗಾರರು ಟೆಸ್ಟ್ ಪಂದ್ಯಕ್ಕೆ ಸೀಮಿತವಾದ್ರೆ, ಇನ್ನುಳಿದ ಬೆಂಚ್ ಸ್ಟ್ರೇಂತ್ ಎಂದು ಹೇಳುವ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳನ್ನು ಆಡುತ್ತಿದ್ದಾರೆ.
ಇನ್ನೊಂದೆಡೆ ಈ ಸರಣಿಯಲ್ಲಿ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯಾ, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ನಂತಹ ಆಟಗಾರರು ಆಡಬಹುದು. ಅದೇ ರೀತಿ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನೆಡೆಸಬಹುದು.
ಒಂದು ದೇಶದ ಎರಡು ತಂಡಗಳು ಬೇರೆ ಬೇರೆ ರಾಷ್ಟ್ರಗಳ ವಿರುದ್ಧ ಆಡಬಹುದು ಅನ್ನೋ ಪರಿಕಲ್ಪನೆಗೆ ಬಿಸಿಸಿಐ ಈ ಮೂಲಕ ನಾಂದಿಯಾಡಬಹುದು. ಅದೇ ರೀತಿ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟ್ ನಂತೆ ಭಾರತದಲ್ಲೂ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ತಂಡಗಳಿಗೆ ಪ್ರತ್ಯೇಕ ಆಟಗಾರರನ್ನು ಆಯ್ಕೆ ಮಾಡುವ ಯೋಚನೆ ಕೂಡ ಭವಿಷ್ಯದಲ್ಲಿರಬಹುದು. ಇದಕ್ಕೆ ಪೂರಕವಾಗಿ ಶ್ರೀಲಂಕಾ ಸರಣಿ ನಡೆಯುತ್ತಿದೆ.
ಈ ಹಿಂದೆ ಕೆಲವು ರಾಷ್ಟ್ರಗಳ ವಿರುದ್ಧ ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿತ್ತು. ಆದ್ರೆ ಆಗ ತಂಡದಲ್ಲಿ ಟೀಮ್ ಇಂಡಿಯಾದ ಕೆಲವು ಖಾಯಂ ಆಟಗಾರರು ಇರುತ್ತಿದ್ದರು ಆದ್ರೆ ಈಗ ಅವಕಾಶ ವಂಚಿತರಿಗೆ ಈ ಮೂಲಕ ಅವಕಾಶ ನೀಡುವ ಪ್ಲಾನ್ ಕೂಡ ಇರಬಹುದು.
ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಅದೇ ರೀತಿ ಈಗ ಮತ್ತೊಂದು ಬದಲಾವಣೆಯಾದ್ರೂ ಆಗಬಹುದು.








