ಯೆಮನ್‌ನಲ್ಲಿ ಕೊಲೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ಭಾರತ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ, ಯೆಮನ್‌ನ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಇದಕ್ಕಿಂತ ಹೆಚ್ಚು ಏನನ್ನು ಮಾಡಲಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಯೆಮನ್‌ನಲ್ಲಿ ಈಗ ಗೃಹಯುದ್ಧದಂತಹ ಪರಿಸ್ಥಿತಿ ಇರುವ ಕಾರಣ, ಭಾರತದಿಂದ ಸಾಕಷ್ಟು ಬದಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ಈಗಾಗಲೇ ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ. ಅದು ಈಗ ನಿರ್ದಿಷ್ಟ ಹಂತದಲ್ಲಿ ನಿಂತಿದೆ. ಅದಕ್ಕಿಂತ ಹೆಚ್ಚು ಈ ಹೊತ್ತಿನಲ್ಲಿ ಏನು ಮಾಡಲಾಗದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜುಲೈ 16 ರಂದು ಗಲ್ಲು ಶಿಕ್ಷೆ ಜಾರಿ:
ಯೆಮನ್ ನ್ಯಾಯಾಂಗವು ಜುಲೈ 16 ರಂದು ನಿಮಿಷಾ ಪ್ರಿಯಾಳ ಮೇಲೆ ಮರಣದಂಡನೆ ಜಾರಿ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಕಾನೂನು ಕ್ರಮಗಳು, ರಾಜತಾಂತ್ರಿಕ ಸಂಪರ್ಕಗಳು ಹಾಗೂ ಸ್ಥಳೀಯ ಸಂಘಟನೆಗಳ ಮೂಲಕ ನಿರಂತರ ಪ್ರಯತ್ನ ಮಾಡುತ್ತಿದೆ.
ಕೇರಳದ ನರ್ಸ್ ಆಗಿರುವ ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಒಬ್ಬ ಪ್ರಜೆಯ ಹತ್ಯೆ ಆರೋಪದಲ್ಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ಸಂಬಂಧ ನಿಮ್ಮಿಷಾ ಕುಟುಂಬಸ್ಥರು ಭಾರತದ ಸರ್ಕಾರದ ನೆರವನ್ನು ಕೋರಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಮನವಿ:
ನಿಮಿಷಾ ಕುಟುಂಬದವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ತನ್ನ ವಾದವನ್ನು ಮಂಡಿಸಿತು. ನಾವು ರಾಜತಾಂತ್ರಿಕ ಮಟ್ಟದಲ್ಲಿ ಸಾಧ್ಯವಿರುವಷ್ಟು ಪ್ರಯತ್ನಿಸಿದ್ದು, ಹೆಚ್ಚಿನದನ್ನು ಮಾಡಲು ಯೆಮನ್‌ನ ಪರಿಸ್ಥಿತಿ ಅನುಕೂಲಕರವಿಲ್ಲ ಎಂದು ತಿಳಿಸಲಾಗಿದೆ.








