ಏಷ್ಯನ್ ಗೇಮ್ಸ್ 2023ರ (Asian Games 2023) ನ ಮಹಿಳಾ ಟಿ20 ಯಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್ಗೆ ಪ್ರವೇಶ ಮಾಡಿದೆ. ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಮೃತಿ ಮಂದಾನ ನಾಯಕತ್ವದ ಭಾರತ ತಂಡವು 8 ವಿಕೆಟ್ ಗಳ ಜಯ ಸಾಧಿಸಿ, ಫೈನಲ್ ಪ್ರವೇಶಿಸಿದೆ.
ಈ ಮೂಲಕ ಪದಕವನ್ನು ಖಚಿತ ಪಡಿಸಿದೆ. ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನ ಅಥವಾ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡ ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋಯಿತು. ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಬಾಂಗ್ಲಾ ಕೇವಲ 51 ರನ್ಗಳಿಗೆ ಆಲೌಟ್ ಆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶಕ್ಕೆ ಪೂಜಾ ವಸ್ತ್ರಾಕರ್ ಶಾಕ್ ನೀಡಿದರು. ಪೂಜಾ ತಮ್ಮ ಮೊದಲ ಓವರ್ನ ಮೊದಲ ಎಸೆತದಲ್ಲೇ ಶಾಥಿ ರಾಣಿಯನ್ನು ಔಟ್ ಮಾಡಿದರೆ, 5ನೇ ಎಸೆತದಲ್ಲಿ ಶಮೀಮಾ ಸುಲ್ತಾನ ಎಲ್ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿಸಿದರು. ಸೋಭಾನಾ ಮೊಸ್ತರಿ 8 ರನ್ ಗಳಿಸಿ ಔಟ್ ಆದರು. ನಂತರರಿತು ಮೋನಿ 8 ರನ್, ಮಾರುಫಾ ಅಕ್ಟರ್ 0, ಶೋರ್ನಾ ಅಕ್ಟರ್ 0, ಫಾಹಿಮಾ ಖಾತುನ್ 0, ಸುಲ್ತಾನಾ ಖಾತುನ್ 3, ರಬೇಯಾ ಖಾನ್ 3 ಹಾಗೂ ನಹಿದಾ ಅಕ್ಟರ್ 9 ರನ್ ಗಳಿಸಿದರು. ಈ ಮೂಲಕ ಬಾಂಗ್ಲಾ ತಂಡವು 17.5 ಓವರ್ಗಳಲ್ಲಿ 51 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಪೂಜಾ 4 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಟಿಟಾಸ್ ಸಾಧು , ದೇವಿಕಾ ವೈದ್ಯ , ಅಮಂಜೋತ್ ಕೌರ್ , ರಾಜೇಶ್ವರಿ ಗಾಯಕ್ವಾಡ್ ತಲಾ 1 ವಿಕೆಟ್ ಪಡೆದು ಮಿಂಚಿದರು.
52 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.








