ಅಹಮದಾಬಾದ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, 21 ನೇ ಶತಮಾನಕ್ಕೆ ದಿಕ್ಕು ರೂಪಿಸುವಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂ ದೇಶಗಳು ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಮಾತ್ರವಲ್ಲದೆ, ಇಡೀ ಪ್ರಪಂಚದ ಶಾಂತಿ,ಪ್ರಗತಿ ಮತ್ತು ಸುರಕ್ಷತೆಗೂ ಪರಿಣಾಮಕಾರಿ ಕೊಡುಗೆ ನೀಡಬಲ್ಲವು ಎಂದು ಹೇಳಿದರು. ದಶಕದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿಯನ್ನು ‘ಬಹು ದೊಡ್ಡ ಅವಕಾಶ’ ಎಂದು ವಿವರಿಸಿದ ಮೋದಿ ಅವರು, 21 ನೇ ಶತಮಾನದಲ್ಲಿ ಹೊಸ ಸ್ಪರ್ಧೆ, ಹೊಸ ಸವಾಲುಗಳು ಮತ್ತು ಹೊಸ ಅವಕಾಶಗಳು ಬದಲಾವಣೆಗೆ ಅಡಿಪಾಯ ಹಾಕುತ್ತಿವೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ(ಅಮೆರಿಕ) ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ(ಭಾರತ) ನಡುವಿನ ಸಂಬಂಧದಲ್ಲಿನ ಸಮಾನತೆಗಳನ್ನು ಪ್ರತಿಪಾದಿಸಿದ ಮೋದಿ,’ ಭಾರತದ ಅತಿದೊಡ್ಡ ವ್ಯಾಪಾರ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅಮೆರಿಕ ಪಾಲುದಾರ ರಾಷ್ಟ್ರವಾಗಿದೆ. ಎರಡೂ ದೇಶಗಳ ನಡುವಿನ ಸಂಬಂಧ ಪ್ರತಿಯೊಂದು ವಿಷಯದಲ್ಲೂ ಬೆಳೆಯುತ್ತಿದೆ.’ ಎಂದು ಹೇಳಿದರು.

‘ಅಮೆರಿಕ ಇಂದು, ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಭಾರತೀಯ ಸೇನಾ ಪಡೆಗಳು ಅಮೆರಿಕದೊಂದಿಗೆ ಹೆಚ್ಚು ಸಮರಾಭ್ಯಾಸಗಳನ್ನು ನಡೆಸಿವೆ. ಭಾರತಕ್ಕೆ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ ಸಹಭಾಗಿತ್ವ ಹೊಂದಿರುವ ದೇಶವೆಂದರೆ ಅದು ಅಮೇರಿಕ ದೇಶವಾಗಿದೆ. ‘ಏಕಕಾಲದಲ್ಲಿ ಹೆಚ್ಚು ಉಪಗ್ರಹಗಳನ್ನು ಕಳುಹಿಸುವುದರಲ್ಲಿ ಮಾತ್ರ ಭಾರತ, ವಿಶ್ವ ದಾಖಲೆಯನ್ನು ಸೃಷ್ಟಿಸುತ್ತಿಲ್ಲ. ಆದರೆ, ಹಣಕಾಸು ಒಳಗೊಳ್ಳುವಿಕೆಯಲ್ಲಿ ವಿಶ್ವ ದಾಖಲೆ ಸ್ಥಾಪಿಸಿದೆ. ಇಂದು ಭಾರತ ಕೇವಲ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಮಾತ್ರ ಹೊಂದಿಲ್ಲ. ಭಾರತವು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆಯನ್ನು ಸಹ ನಡೆಸುತ್ತಿದೆ. ವಿಶ್ವದ ಅತಿದೊಡ್ಡ ಸೌರ ಪಾರ್ಕ್ ನಿರ್ಮಾಣ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮವೂ ಭಾರತದಲ್ಲಿ ನಡೆಯುತ್ತಿದೆ.’ ಎಂದು ಅವರು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ನಿಯೋಗಕ್ಕೆ ತಿಳಿಸಿದರು. ಇದೇ ವೇಳೆ ಅಮೆರಿಕದಲ್ಲಿನ ಭಾರತೀಯ ಸಮುದಾಯ ಜತೆಗಿನ ಸಂಬಂಧಗಳನ್ನು ಹಂಚಿಕೊಂಡ ಮೋದಿಯವರು, ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದಾಗ ಅಮೆರಿಕದಲ್ಲಿ ವಾಸಿಸುವ ಭಾರತೀಯರೆಲ್ಲರೂ ಸಹ ಹೆಮ್ಮೆಪಡುತ್ತಾರೆ ಎಂದು ಹೇಳಿದರು.
ಕೊನೆಯದಾಗಿ ‘ಭಾರತ-ಅಮೆರಿಕ ಸ್ನೇಹ-ಬಾಂಧವ್ಯ ಚಿರಾಯುವಾಗಲಿ’ ಎಂದು ಪ್ರಧಾನಿ ಮೋದಿ ತಮ್ಮ ಭಾಷಣ ಮುಗಿಸಿದರು.








