ಸಿಡ್ನಿಯ ಕ್ರಿಕೆಟ್ ಮೈದಾನದಲ್ಲೂ ಅದಾನಿ ವಿರುದ್ಧ ಪ್ರತಿಭಟನೆ
ಅದಾನಿಯನ್ನು ವಿರೋಧಿಸುವವರು ಭಾರತದಲ್ಲಿ ಮಾತ್ರವಲ್ಲ.. ದೂರದ ಆಸ್ಟ್ರೇಲಿಯಾದಲ್ಲೂ ಇದ್ದಾರೆ.
ಹೌದು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಅದಾನಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಲಾಗಿದೆ. ಪಂದ್ಯದ ಆರನೇ ಓವರ್ ವೇಳೆ ಮೈದಾನದೊಳಗೆ ನುಸುಳಿದ ಇಬ್ಬರು ಪ್ರತಿಭಟನಾಕಾರರು ಅದಾನಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದ್ದಾರೆ.
ಭಿತ್ತಿ ಪತ್ರದಲ್ಲಿ ನೋ ಒಂದು ಬಿಲಿಯನ್ ಡಾಲರ್ ಅದಾನಿ ಲೋನ್ಸ್ ಎಂದು ಬರೆದಿತ್ತು. ಹಾಗೇ ಧರಿಸಿದ್ದ ಟೀ ಶರ್ಟ್ ನಲ್ಲಿ ಸ್ಟಾಪ್ ಅದಾನಿ.. ಸ್ಡಾಪ್ ಕೋಲ್ ಸ್ಟಾಪ್ ಅದಾನಿ..ಟೇಕ್ ಆಕ್ಷನ್ ಎಂದು ಬರೆದಿತ್ತು.
ಪ್ರತಿಭಟನಾಕಾರರು ಮೈದಾನದೊಳಗೆ ಪ್ರವೇಶಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಜಾಗ್ರತರಾದ್ರು. ಅಲ್ಲದೆ ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿಗಳು ಮೈದಾನದಿಂದ ಹೊರಗಡೆ ಕರೆದುಕೊಂಡು ಹೋದ್ರು.
ಈಗಾಗಲೇ ಕೋವಿಡ್ ನಿಂದಾಗಿ ಇಂಗ್ಲೆಂಡ್ ಮತ್ತು ಐಪಿಎಲ್ ನಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿಲ್ಲ. ಆದ್ರೆ ಆಸ್ಟ್ರೇಲಿಯಾ ಭಾರತ ನಡುವಿನ ಪಂದ್ಯಕ್ಕೆ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಲಾಗಿತ್ತು. ಅದೇ ರೀತಿ ಕ್ರಿಕೆಟ್ ಮೈದಾನದಲ್ಲಿ ಈ ರೀತಿಯ ಪ್ರತಿಭಟನೆ ಹಾಗೂ ಕೆಲವೊಂದು ಅನುಚಿತ ವರ್ತನೆ ನಡೆಯುತ್ತಿರುವುದು ಇದೇನೂ ಹೊಸದಲ್ಲ. ಈ ಪ್ರತಿಭಟನೆ ಈಗ ಹೊಸ ಸೇರ್ಪಡೆಯಷ್ಟೇ..
ಅಷ್ಟಕ್ಕೂ ಆಸ್ಟ್ರೇಲಿಯನ್ನರಿಗೆ ಅದಾನಿ ವಿರುದ್ಧ ಸಿಟ್ಟು ಯಾಕೆ ಅನ್ನೋ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲೆಂಡ್ ನಲ್ಲಿ ಅದಾನಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದೆ. ಈ ಬಗ್ಗೆ ಅಲ್ಲಿ ಪ್ರತಿಭಟನೆ ಕೂಡ ನಡೆಯುತ್ತಿದೆ. ಕಳೆದ ಸೆಪ್ಟಂಬರ್ ನಲ್ಲಿ ಅದಾನಿ ಗ್ರೂಪ್ ಅಲ್ಲಿನ ಪರಿಸರ ಕಾರ್ಯಕರ್ತರ ವಿರುದ್ಧ ಕೋರ್ಟ್ ನಲ್ಲಿ ಜಯ ಸಾಧಿಸಿತ್ತು. ಹಾಗೇ ಕ್ವೀನ್ಸ್ ಲೆಂಡ್ ನ ಸುಮಾರು 1500 ಮಂದಿಗೆ ಉದ್ಯೋಗದ ಭರವಸೆಯನ್ನು ನೀಡಿದೆ.
ಈ ನಡುವೆ ಅದಾನಿ ಗ್ರೂಪ್ ಗೆ ಎಸ್ ಬಿಐ ಸುಮಾರು ಒಂದು ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಅನುಮೋದಿಸಬಾರದು ಎಂದು ಪ್ರತಿಭಟನಾ ಸ್ಟಾಪ್ ಅದಾನಿ ಗುಂಪು ಒತ್ತಾಯವನ್ನು ಕೂಡ ಮಾಡಿದೆ.








