ಚೆನ್ನೈ ನಲ್ಲಿ ಮಿನುಗುತ್ತಿರುವ ಅಶ್ವಿನಿ ನಕ್ಷತ್ರ…!
ಕೆಲವೊಂದು ಬಾರಿ ಅನುಭವ ಹಾಗೂ ಹಿರಿತನ ಹೇಗೆ ನೆರವಾಗುತ್ತೆ ಅನ್ನೋದಕ್ಕೆ ಟೀಮ್ ಇಂಡಿಯಾದ ಮ್ಯಾಜಿಷಿಯನ್ ಅಶ್ವಿನ್ ಉತ್ತಮ ನಿದರ್ಶನ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಟೀಮ್ ಇಂಡಿಯಾಗೆ ಎಷ್ಟೊಂದು ಅನಿವಾರ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ. ಹಾಗಂತ ಅಶ್ವಿನ್ ಇದೇ ರೀತಿ ತಂಡಕ್ಕೆ ನೆರವಾಗುತ್ತಿರುವುದು ಇದೇನೂ ಮೊದಲಲ್ಲ.
ಈ ಹಿಂದೆ ಆಸ್ಟ್ರೇಲಿಯಾ ಸರಣಿಯಲ್ಲೂ ವಿರಾಟ್ ಕೊಹ್ಲಿಯವರ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಿದ್ದರು. 1-0 ಹಿನ್ನಡೆಯಲ್ಲಿದ್ದ ಟೀಮ್ ಇಂಡಿಯಾ ನಂತರ ಸರಣಿಯನ್ನು 2-1ರಿಂದ ಗೆದ್ದುಕೊಂಡಿರುವುದು ಈಗ ಇತಿಹಾಸ. ಅಷ್ಟಕ್ಕೂ ಈ ಗೆಲುವಿನ ಹಿಂದೆ ಆರ್. ಅಶ್ವಿನ್ ಅವರ ಆಲ್ ರೌಂಡ್ ಆಟವಿತ್ತು ಎಂಬುದನ್ನು ಮರೆಯುವ ಹಾಗಿಲ್ಲ.
ಅದೇ ರೀತಿ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.
ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ನಾಲ್ಕನೇ ದಿನವೇ ಗೆಲುವು ಸಾಧಿಸುವ ಹಾದಿಯಲ್ಲಿದೆ.
ಅಂದ ಹಾಗೇ ಈ ಸುಲಭ ಗೆಲುವಿನ ಹಾದಿಯ ಹಿಂದೆ ಅಶ್ವಿನ್ ಅವರ ಕೊಡುಗೆ ಅಪಾರ. ಸ್ಪಿನ್ ದಾಳಿಯ ಮೂಲಕ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸಿದ್ರು.
ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾದ ಬ್ಯಾಟ್ಸ್ ಮೆನ್ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಸೇರಿಕೊಂಡಿದ್ದರು. ಆಗ ಕ್ರೀಸ್ ಗೆ ಬಂದ ಅಶ್ವಿನ್ ಅವರು, ಇಂಗ್ಲೀಷ್ ಬೌಲರ್ ಗಳಿಗೆ ಸವಾಲಾಗಿ ನಿಂತ್ರು. ನೋಡ ನೋಡುತ್ತಿದ್ದಂತೆ ಶತಕ ಕೂಡ ದಾಖಲಿಸಿದ್ದರು.
ಈ ಶತಕ ಮತ್ತು ಅದ್ಭುತ ಬೌಲಿಂಗ್ ದಾಳಿಯ ಮೂಲಕ ಅಶ್ವಿನ್ ಮತ್ತೊಂದು ದಾಖಲೆಯ ಪುಟ ಸೇರಿಕೊಂಡ್ರು.
ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಮತ್ತು ಶತಕ ದಾಖಲಿಸಿದವರ ಸಾಲಿಗೂ ಸೇರಿಕೊಂಡಿದ್ದರು. ಅಲ್ಲದೆ ಅಶ್ವಿನ್ ಅವರು ಈ ರೀತಿಯ ಸಾಧನೆ ಮಾಡುತ್ತಿರುವುದು ಇದು ಮೂರನೇ ಬಾರಿ.
ಈ ಹಿಂದೆ ಇಂಗ್ಲೆಂಡ್ ನ ಇಯಾನ್ ಬಾಥವ್ ಅವರು ಐದು ಬಾರಿ ಈ ರೀತಿಯ ಸಾಧನೆ ಮಾಡಿದ್ದರು.
ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ಬಾಂಗ್ಲಾ ದೇಶ ಶಕೀಬ್ ಆಲ್ ಹಸನ್, ವೆಸ್ಟ್ ಇಂಡೀಸ್ ನ ಗ್ಯಾರಿ ಸೋಬರ್ಸ್ ಮತ್ತು ಪಾಕಿಸ್ತಾನದ ಮುಷ್ತಾಕ್ ಮೊಹಮ್ಮದ್ ಅವರು ಎರಡು ಬಾರಿ ಈ ರೀತಿಯ ಸಾಧನೆ ಮಾಡಿದ್ದರು.