India vs West Indies : ಪಾಕ್ ಹೆಸರಲ್ಲಿದ ದಾಖಲೆ ಅಳಿಸಿ ಹಾಕಿದ ಟೀಮ್ ಇಂಡಿಯಾ…
ಶುಭಮನ್ ಗಿಲ್ ಬ್ಯಾಟಿಂಗ್ ಅಬ್ಬರಕ್ಕೆ, ಯಜುವೇಂದ್ರ ಚಹಲ್ ಮಾರಕ ದಾಳಿಕೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ 3 ನೇ ಪಂದ್ಯದಲ್ಲೂ ಸೋಲನುಭವಿಸಿದೆ. ಭಾರತ 119 ರನ್‍ಗಳ ಜಯದೊಂದಿಗೆ ಸರಣಿ ಕ್ಲೀನ್ ಸ್ವೀಪ್ ಸಾಧಿಸಿ ಮೆರೆದಾಡಿದೆ.
ಮಳೆಯ ನಡುವೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶುಭಮನ್ ಗಿಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಒಟ್ಟುಗೂಡಿಸಿದರು. ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 35 ಓವರ್‌ಗಳಲ್ಲಿ 226 ರನ್‍ಗಳ ಗುರಿಯೊಂದಿಗೆ ಕಣಕ್ಕಿಳಿದ ವಿಂಡೀಸ್, ಭಾರತದ ಬೌಲರ್‌ಗಳ ಬಿಗಿ ದಾಳಿಗೆ ನಲುಗಿ 26 ಓವರ್‌ಗಳಲ್ಲಿ ಕೇವಲ 147 ರನ್‍ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 3-0 ಅಂತರದಲ್ಲಿ ಸರಣಿ ಗೆದ್ದು ವಿಂಡೀಸ್‍ಗೆ ತವರಿನಲ್ಲಿ ಶಾಕ್ ನೀಡಿತು.
ವಿಂಡೀಸ್ ವಿರುದ್ಧದ ಸರಣಿ ಗೆಲ್ಲುವ ಮೂಲಕ ಭಾರತ ಪಾಕಿಸ್ತಾನದ ಹೆಸರಿನಲ್ಲಿದ್ದ ದಾಖಲೆಯೊಂದನ್ನ ಮುರಿದು ಹಾಕಿದೆ. ಪಾಕಿಸ್ಥಾನವು 1996ರಿಂದ 2021ರವರೆಗೆ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಸತತ 11 ಏಕದಿನ ಸರಣಿಗಳನ್ನು ಗೆದ್ದಿತ್ತು. ಒಂದು ತಂಡದ ಮೇಲೆ ಅತಿ ಹೆಚ್ಚು ಸರಣಿ ಗೆದ್ದ ದಾಖಲೆ ಪಾಕ್ ಮೇಲಿತ್ತು. ಈ ದಾಖಲೆಯನ್ನು ನಿನ್ನೆ ಭಾರತ ಬ್ರೇಕ್ ಮಾಡಿ, ಅಗ್ರಸ್ಥಾನಕ್ಕೆ ನೆಗೆದಿದೆ.
ಕಳೆದ 2007ರಿಂದ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಒಂದೇ ಒಂದು ಸರಣಿಯೂ ಗೆದ್ದಿಲ್ಲ. ಈ 15 ವರ್ಷಗಳ ಅಂತರದಲ್ಲಿ ಭಾರತ ಮತ್ತು ವಿಂಡೀಸ್ ಒಟ್ಟು 12 ದ್ವಿಪಕ್ಷೀಯ ಸರಣಿಗಳಲ್ಲಿ ಆಡಿವೆ. ಈ ಎಲ್ಲಾ 12 ಸರಣಿಯಲ್ಲೂ ಭಾರತ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ಇದು ಜಾಗತಿಕ ದಾಖಲೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಕ್ರಿಕಟ್ ತಂಡವೊಂದರ ವಿರುದ್ಧ ಸತತವಾಗಿ ಇಷ್ಟು ಸರಣಿಗಳಲ್ಲಿ ಗೆಲುವು ದಾಖಲಿಸಿರುವುದು ಇದೇ ಮೊದಲು. ಇದನ್ನು ಭಾರತ ಮಾಡಿರುವುದು ವಿಶೇಷ.








