ಜಗತ್ತಿನ 3ನೇ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಭಾರತ: ಮುಕೇಶ್ ಅಂಬಾನಿ – Saaksha Tv
ಮುಂಬೈ: 2030-32ರ ವೇಳೆಗೆ ಭಾರತ ವಿಶ್ವದ 3ನೇ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಭವಿಷ್ಯ ನುಡಿದಿದ್ದಾರೆ.
ಬುಧವಾರ ಏಷ್ಯಾ ಆರ್ಥಿಕ ಸಂವಾದ(ಎಇಡಿ)ದಲ್ಲಿ ಪುಣೆ ಇಂಟರ್‌ನ್ಯಾಶನಲ್ ಸೆಂಟರ್‌ನ ಅಧ್ಯಕ್ಷ ಡಾ ಆರ್‌ಎ ಮಶೆಲ್ಕರ್ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು ಈ ಸಾಧನೆಯನ್ನು ಸಾಧಿಸಲು ದೇಶವು ಮೂರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.
ಮೊದಲನೆಯದಾಗಿ, ಭಾರತವು ಎರಡಂಕಿಯ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಲು ಇಂಧನ ಉತ್ಪಾದನೆಯನ್ನು ಹೆಚ್ಚಿಸಬೇಕು. ತಂತ್ರಜ್ಞಾನದ ಬಳಕೆಯ ಕೈಗೆಟುಕುವ ಆಧಾರದ ಮೇಲೆ ಇದನ್ನು ಮಾಡಬೇಕಾಗಿದೆ. ಎರಡನೆಯದಾಗಿ, ಈ ವರ್ಧಿತ ಉತ್ಪಾದನೆಯಲ್ಲಿ ಭಾರತವು ಹಸಿರು ಮತ್ತು ಶುದ್ಧ ಶಕ್ತಿಯ ಪಾಲನ್ನು ಹೆಚ್ಚಿಸಬೇಕು. ಮೂರನೆಯದಾಗಿ, ಮೇಲಿನ ಎರಡು ಸವಾಲುಗಳನ್ನು ಅನುಸರಿಸುವಲ್ಲಿ ಭಾರತವು ‘ಆತ್ಮನಿರ್ಭರ ಭಾರತ’ ಗುರಿಯನ್ನು ಸಾಧಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಪ್ರಪಂಚದ ಮೂರನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಜಪಾನ್ ನ್ನು ಭಾರತ ಹಿಂದಿಕ್ಕಲಿದೆ. ಈ ಮೂಲಕ ಭಾರತ ಏಷ್ಯಾದ 2ನೇ ಅತೀ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ
ಮುಂದಿನ 20 ವರ್ಷಗಳಲ್ಲಿ ಭಾರತ ಹಸಿರು ಶಕ್ತಿ ಸೂಪರ್ ಪವರ್ ರಫ್ತು ಮಾಡುವ ರಾಷ್ಟ್ರವಾಗಲಿದೆ. ಭಾರತ ಸ್ವಾವಲಂಬಿಯಾಗಿ ಹಸಿರು ಹಾಗೂ ಶುದ್ಧ ಶಕ್ತಿಯನ್ನು ಉತ್ಪಾದಿಸುತ್ತಿದ್ದಂತೆ ಜಾಗತಿಕವಾಗಿ ಇತರ ದೇಶಗಳನ್ನು ಹಿಂದಿಕ್ಕಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಳೆದ 20 ವರ್ಷಗಳಲ್ಲಿ ಭಾರತ ತಂತ್ರಜ್ಞಾನದಲ್ಲಿ ಮುಂದುವರಿದು ಈ ಹಂತಕ್ಕೆ ತಲುಪಿದೆ. ಇದೇ ರೀತಿ ಮುಂದಿನ 20 ವರ್ಷಗಳಲ್ಲಿ ಶಕ್ತಿ ಹಾಗೂ ಜೀವವಿಜ್ಞಾನದಲ್ಲಿ ಮಹಾಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದರು. ಇದರೊಂದಿಗೆ 2030ರ ಹೊತ್ತಿಗೆ ಏಷ್ಯಾ ಜಾಗತಿಕ ಬೆಳವಣಿಗೆಗೆ ಶೇ. 60ರಷ್ಟು ಕೊಡುಗೆ ನೀಡಲಿದೆ ಎಂದು ಅಂಬಾನಿ ಭವಿಷ್ಯ ನುಡಿದಿದ್ದಾರೆ.