2021ರ ಟಿ-ಟ್ವೆಂಟಿ ವಿಶ್ವಕಪ್ – ಫೈನಲ್ ನಲ್ಲಿ ಭಾರತ – ಪಾಕ್ ಮುಖಾಮುಖಿ- ಕಪ್ ಗೆಲ್ಲೋದು ಮಾತ್ರ ಪಾಕಿಸ್ತಾನವಂತೆ..!
ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಇನ್ನೂ ಎರಡು ಮೂರು ತಿಂಗಳು ಇವೆ. ಭಾರತದ ಆಯೋಜನೆಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಈ ಬಾರಿ ಯುಎಇ ನಲ್ಲಿ ಆಯೋಜನೆ ಮಾಡಲಾಗುತ್ತಿದೆ.
ಈಗಾಗಲೇ ವಿಶ್ವಕಪ್ ಟೂರ್ನಿಯ ದಿನಾಂಕ ಫಿಕ್ಸ್ ಆಗಿದೆ. ಅದಕ್ಕೆ ತಕ್ಕಂತೆ ತಂಡಗಳು ಪೂರ್ವ ಸಿದ್ಧತೆಗಳು ನಡೆಸುತ್ತಿವೆ.
ಇನ್ನೊಂದೆಡೆ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಬಣದಲ್ಲಿವೆ. ಅಲ್ಲದೆ ಲೀಗ್ ಪಂದ್ಯದಲ್ಲೇ ಮುಖಾಮುಖಿಯಾಗಲಿವೆ.
ಅಂದ ಹಾಗೇ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೋರಾಟಕ್ಕೆ ಈಗಿನಿಂದಲೇ ಕಿಚ್ಚು ಹಚ್ಚಲಾಗುತ್ತಿದೆ. ಆದ್ರೆ ನೆನಪಿಡಿ, ಅದು ಏಕದಿನ ವಿಶ್ವಕಪ್ ಆಗಿರಲಿ, ಟಿ-ಟ್ವೆಂಟಿ ವಿಶ್ವಕಪ್ ಆಗಿರಲಿ, ಪಾಕಿಸ್ತಾನಕ್ಕೆ ಭಾರತ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ. ನನ್ನ ನೀನು ಗೆಲ್ಲಲಾರೆ ಅಂತ ವಿಶ್ವಕಪ್ ಟೂರ್ನಿಗಳಲ್ಲಿ ಮುಖಾಮುಖಿಯಾದಾಗ ಭಾರತೀಯ ಅಭಿಮಾನಿಗಳು ಪಾಕ್ ಅಭಿಮಾನಿಗಳನ್ನು ಸವಾಲು ಹಾಕುತ್ತಾರೆ. ಅದೇ ರೀತಿ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಕೂಡ.
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಂದ್ರೆ ಅದು ಆಟಕ್ಕಿಂತ ಹೆಚ್ಚಾಗಿ ಯುದ್ಧದಂತೆ ಬಣ್ಣಿಸಲಾಗುತ್ತದೆ. ಅದೇನೇ ಇರಲಿ, ಈ ನಡುವೆ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾರು ಗೆಲ್ತಾರೆ ? ಯಾವ ಯಾವ ತಂಡಗಳು ಫೈನಲ್ ನಲ್ಲಿ ಕಾದಾಟ ನಡೆಸುತ್ತವೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಹೌದು, ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಆಕ್ತರ್ ಪ್ರಕಾರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತವೆ. ಚೊಚ್ಚಲ 2007ರ ವಿಶ್ವಕಪ್ ಪುನಾರವರ್ತನೆಯಾಗುತ್ತದೆ. ಆದ್ರೆ ಫೈನಲ್ ನಲ್ಲಿ ಈ ಬಾರಿ ಗೆಲ್ಲುವುದು ಪಾಕಿಸ್ತಾನ ಅಂತ ಶೋಯಿಬ್ ಅಖ್ತರ್ ಹೇಳಿದ್ದಾರೆ.
ಅದು ಅಲ್ಲದೆ ಯುಎಇ ಅಂಗಣಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಪೂರಕವಾಗಿರಲಿವೆ. ಹೀಗಾಗಿ ಈ ಎರಡು ತಂಡಗಳು ಫೈನಲ್ ಪ್ರವೇಶಿಸುತ್ತವೆ. ಆದ್ರೆ ಪ್ರಶಸ್ತಿ ಗೆಲ್ಲುವುದು ವಿರಾಟ್ ಬಳಗವಲ್ಲ. ಬದಲಾಗಿ ಬಾಬರ್ ಅಝಮ್ ಬಳಗ ಗೆಲ್ಲಲಿದೆ ಎಂದು ಹೇಳಿದ್ದಾರೆ.
ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 11 ಬಾರಿ ಮುಖಾಮುಖಿಯಾಗಿವೆ. ಈ 11 ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿಲ್ಲ.
ಇನ್ನು 2016ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ಪಾಕ್ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿತ್ತು. ಹಾಗೇ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಪಾಕ್ ತಲೆಬಾಗಿತ್ತು. ಮತ್ತೊಂದೆಡೆ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಭಾರತ ತಂಡವನ್ನು ಪರಾಭವಗೊಳಿಸಿತ್ತು. ಐಸಿಸಿ ಟೂರ್ನಿಗಳಲ್ಲಿ ಭಾರತ ಪಾಕ್‍ಗೆ ಸೋತಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ. ಆದ್ರೆ ವಿಶ್ವಕಪ್ ಟೂರ್ನಿಗಳಲ್ಲಿ ಸೋತಿಲ್ಲ. ಅದು ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ನಲ್ಲೂ ಮುಂದುವರಿಯುತ್ತದೆ. ಆದ್ರೆ ಶೋಯಿಬ್ ಅಖ್ತರ್ ಸುಮ್ಮನೆ ಪಾಕ್ ಗೆಲ್ಲುತ್ತೆ ಅಂತ ಹಗಲು ಕನಸು ಕಾಣುತ್ತಿದ್ದಾರೆ.