ಹೊಸದಿಲ್ಲಿ, ಜೂನ್ 2 : ಕೊರೊನಾ ವೈರಸ್ ಸೋಂಕನ್ನು ಭಾರತದಿಂದ ನಿರ್ಮೂಲನೆ ಮಾಡುವ ಜತೆಗೆ ದೇಶದ ಆರ್ಥಿಕ ಅಭಿವೃದ್ಧಿ ಪುನಃಸ್ಥಾಪಿಸಿ ಭಾರತವು ಪ್ರಗತಿಯನ್ನು ಮರಳಿ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಿಐಐನ ವಾರ್ಷಿಕ ಅಧಿವೇಶನ 2020 ರ ಉದ್ಘಾಟಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮೆಲ್ಲರ ಬೆಂಬಲ ಮತ್ತು ಸಹಕಾರದಿಂದ ದೇಶದ ಆರ್ಥಿಕತೆ ಮರುಸ್ಥಾಪಿಸುವುದು ಕಷ್ಟವಾಗುವುದಿಲ್ಲ ಎಂದು ಕೈಗಾರಿಕೋದ್ಯಮಗಳಿಗೆ ಕರೆ ನೀಡಿದರು.
ನಾನು ದೇಶದ ಬೆಳವಣಿಗೆಯನ್ನು ಮರಳಿ ಪಡೆಯಲು ಬಯಸುತ್ತೇನೆ. ಕೊರೋನದ ವಿರುದ್ಧ ಆರ್ಥಿಕತೆಯನ್ನು ಪುನಃಸ್ಥಾಪಿಸುವುದು ನಮ್ಮ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದ್ದು, ನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದರು.
ಕೊರೋನಾ ಸೋಂಕಿನಿಂದ ನಾಗರಿಕರನ್ನು ಕಾಪಾಡುವ ಜೊತೆಗೆ ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸುವುದು ಸರ್ಕಾರದ ಎರಡು ಪ್ರಮುಖ ಜವಾಬ್ದಾರಿಗಳಾಗಿದೆ ಎಂದ ಪ್ರಧಾನಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ಮೇಲೆತ್ತಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ಕೊರೊನಾ ಸಂಕಷ್ಟದಿಂದ ಬಡವರು ಮತ್ತು ವಲಸೆ ಕಾರ್ಮಿಕರನ್ನು ಪಾರು ಮಾಡಲು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಈವರೆಗೆ 53 ಸಾವಿರ ಕೋಟಿ ರೂ.ಗಳ ನೆರವು ನೀಡಲಾಗಿದೆ ಎಂದು ಮೋದಿ ತಿಳಿಸಿದರು.
ಕೊರೊನಾ ಪಿಡುಗನ್ನು ನಿರ್ಮೂಲನೆ ಮಾಡಲು ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಕೊರೊನಾ ನಿಗ್ರಹಕ್ಕಾಗಿ ದೇಶದಾದ್ಯಂತ ಜಾರಿಗೊಳಿಸಲಾದ ಲಾಕ್ಡೌನ್ನಿಂದಾಗಿ ಕುಸಿದಿರುವ ಆರ್ಥಿಕತೆಗೆ ಆಧಾರ ನೀಡಲು ಈಗಾಗಲೇ ಕೆಲವು ಮಹತ್ವದ ವಿಶೇಷ ಆರ್ಥಿಕ ನೆರವನ್ನು ಕೂಡ ಕೇಂದ್ರ ಸರ್ಕಾರ ಪ್ರಕಟಿಸಿದೆ ಎಂದರು. ಕೊರೋನಾ ದಾಳಿಯಿಂದ ಶೋಚನೀಯ ಸ್ಥಿತಿಗೆ ತಲುಪಿರುವ ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರಲು ಪ್ರತಿಯೊಬ್ಬರ ಸಹಕಾರವು ಅಗತ್ಯ ಎಂದು ಮೋದಿ ದೇಶವಾಸಿಗಳ ಬೆಂಬಲ ಕೋರಿದರು.








