ಕಾಂಗರೂ ನಾಡಲ್ಲಿ ಮಿಥಾಲಿ ಪಡೆಗೆ ಸೋಲು
ಆಸ್ಟ್ರೇಲಿಯಾ : ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಾಗಿದೆ.
ಈ ಮೂಲಕ ಮೂರು ಮ್ಯಾಚ್ ಗಳ ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ಪಡೆ 1-0 ಅಂತರದಲ್ಲಿ ಹಿನ್ನಡೆ ಕಾಯ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶಫಾಲಿ ವರ್ಮಾ ಕೇವಲ 8 ರನ್ ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ಇದರ ಬೆನ್ನಲ್ಲೆ ಸ್ಮøತಿ ಮಂದಾನ ಕೂಡ ಪೆವಿಲಿಯನ್ ಸೇರಿಕೊಂಡರು. ಈ ಸಂಕಷ್ಟದ ವೇಳೆ ಭಾರತಕ್ಕೆ ನಾಯಕಿ ಮಿಥಾಲಿ ರಾಜ್ ಹಾಗೂ ಯಸ್ತಿಕಾ ಭಟಿಲಾ ಆಸರೆಯಾದರು.
ಎಚ್ಚರಿಕೆಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಈ ಹಂತದಲ್ಲಿ 35 ರನ್ ಗಳಿಸಿದ್ದ ಯಸ್ತಿಕಾ ಔಟ್ ಆದರು. ಇವರ ಬೆನ್ನೆಲ್ಲೆ ದೀಪ್ತಿ ಶರ್ಮಾ (9) ಹಾಗೂ ಪೂಜಾ (17) ಬೇಗನೆ ನಿರ್ಗಮಿಸಿದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಛಲ ಬಿಡದೇ ಬ್ಯಾಟ್ ಬೀಸಿದ ಮಿಥಾಲಿ ರಾಜ್, 107 ಎಸೆತಗಳಲ್ಲಿ 61 ರನ್ ಬಾರಿಸಿ ಔಟ್ ಆದರು.
ನಂತರ ಬಂದ ರಿಚಾ ಘೋಷ್ ಅಜೇಯ 32 ರನ್ ಸಿಡಿಸಿದ ಪರಿಣಾಮ ಭಾರತ 50 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು.
ಈ ಸಾದಾರಣ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೀಲಿಯಾ ಮಹಿಳಾ ತಂಡ ಭರ್ಜರಿ ಆರಂಭ ಪಡೆಯಿತು. ಓಪನರ್ ಗಳಾದ ರಿಚೆಲ್ ಹೇನೆಸ್ ಮತ್ತು ಅಲಿಸ್ಸಾ ಹೇಲೆ ಬಿರುಸಿನ ಬ್ಯಾಟಿಂಗ್ ನಡೆಸಿದರು.
ಈ ಜೋಡಿ ಬರೋಬ್ಬರಿ 126 ರನ್ ಗಳ ಜೊತೆಯಾಟ ಆಡಿ ಗೆಲುವು ಖಚಿತ ಪಡಿಸಿತು. ಅಲಿಸ್ಸಾ ಹೇಲೆ 77 ಎಸೆತಗಳಲ್ಲಿ 77 ರನ್ ಬಾರಿಸಿ ಔಟ್ ಆದರು.
ರಿಚೆಲ್ 100 ಎಸೆತಗಳಲ್ಲಿ ಅಜೇಯ 93 ಹಾಗೂ ನಾಯಕಿ ಮೆಗ್ ಲ್ಯಾನ್ನಿಂಗ್ 69 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು.
ಅಂತಿಮವಾಗಿ ಆಸ್ಟ್ರೇಲಿಯಾ 41 ಓವರ್ ನಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು 227 ರನ್ ಬಾರಿಸಿ 9 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.