ಅಹಮದಾಬಾದ್: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ ಕ್ರಿಕೆಟ್ ಫೈನಲ್ (World Cup Cricket Final) ಪಂದ್ಯ ನಡೆಯುತ್ತಿದೆ. ಭಾರತದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಭಾರತ ತಂಡವು ಒಟ್ಟು ನಾಲ್ಕು ಬಾರಿ ಫೈನಲ್ ಪಂದ್ಯ ತಲುಪಿದ್ದು, ಈ ಬಾರಿ ಮೂರು ಬಾರಿ ಟಾಸ್ ಸೋತಿತ್ತು. ಇದರಲ್ಲಿ ಎರಡು ಬಾರಿ ಭಾರತ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಕೂಡ ಭಾರತ ತಂಡ ಟಾಸ್ ಸೋತಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಭಾರತ ತಂಡವು 4 ಬಾರಿ ಫೈನಲ್ ಪ್ರವೇಶಿಸಿದ್ದು, ಮೂರು ಬಾರಿ ಟಾಸ್ ಸೋತರೆ ಒಂದು ಬಾರಿ ಟಾಸ್ ಗೆದ್ದಿದೆ. 1983ರ ಫೈನಲ್ನಲ್ಲಿ ಕಪಿಲ್ ದೇವ್ ಟಾಸ್ ಸೋತಿದ್ದರು. ಮೊದಲು ಬ್ಯಾಟ್ ಮಾಡಿದ್ದ ಭಾರತ 183 ರನ್ಗಳಿಗೆ ಆಲೌಟ್ ಆಗಿತ್ತು. ವಿಂಡೀಸ್ 140 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
2003 ರಲ್ಲಿ ನಾಯಕ ಸೌರವ್ ಗಂಗೂಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡಿದ್ದರು. ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದ್ದರೆ ಭಾರತ 234 ರನ್ಗಳಿಗೆ ಆಲೌಟ್ ಆಗಿ, ಸೋಲು ಕಂಡಿತ್ತು. 2011 ರಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ನಷ್ಟಕ್ಕೆ 274 ರನ್ ಸಿಡಿಸಿತ್ತು. ಆನಂತರ ಬ್ಯಾಟ್ ಮಾಡಿದ ಭಾರತ 48.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 277 ರನ್ ಸಿಡಿಸಿ ಭರ್ಜರಿ 6 ವಿಕೆಟ್ಗಳ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಂದು ಕೂಡ ಭಾರತ ಟಾಸ್ ಸೋತಿದ್ದು, ಬ್ಯಾಟಿಂಗ್ ನಡೆಸುತ್ತಿದೆ. ಭಾರತ ಗೆಲ್ಲಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.