ನಮ್ಮ ನೆಮ್ಮದಿಯ ಹಿಂದಿದೆ ‘ಗಡಿ ಭದ್ರತಾ ಪಡೆ’..! – INDIAN ARMY
ಭಾರತೀಯ ಸೇನೆ ಎಂದರೆ ಅದು ಕೇವಲ ಗಡಿ ಕಾಯುವ ಪಡೆ ಅಥವಾ ದೇಶ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಕಾದಾಡುವ ಸೈನ್ಯ ಅಲ್ಲ. ಸೇನೆಯಲ್ಲಿಯೂ ಹಲವಾರು ವಿಭಾಗಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವೂ ಇದೆ. ಅದರಲ್ಲೂ ನಾವು ನೆಮ್ಮದಿಯಾಗಿ ನಿದ್ರಿಸುತ್ತೇವೆ ಎಂದರೆ ಅದರ ಹಿಂದೆ ಭಾರತದ ಗಡಿ ಭದ್ರತಾ ಪಡೆಯ ಶ್ಲಾಘನೀಯ ಕಾರ್ಯವಿದೆ. ವಿಶ್ವದ ಅತಿ ದೊಡ್ಡ ಗಡಿ ಭದ್ರತಾ ಪಡೆ ಎಂಬ ಖ್ಯಾತಿಗೆ ಒಳಗಾಗಿರುವ ಭಾರತೀಯ ಗಡಿ ಭದ್ರತಾ ಪಡೆ ಬಿಎಸ್ಎಫ್ ಎಂತಲೇ ಚಿರಪರಿಚಿತ. ೧೯೬೫ರ ಡಿಸೆಂಬರ್ನಲ್ಲಿ ಬಿಎಸ್ಎಫ್ ಅಸ್ತಿತ್ವಕ್ಕೆ ಬಂತು. ವಿಶ್ವದ ಅತಿ ದೊಡ್ಡ ಗಡಿ ಭದ್ರತಾ ಸೇನೆಯಾದ ಬಿಎಸ್ಎಫ್ ಅನ್ನು ಭಾರತದ ಫಸ್ಟ್ ಲೈನ್ ಆಫ್ ಡಿಫೆನ್ಸ್ ಎಂದೇ ಬಣ್ಣಿಸಲಾಗುತ್ತದೆ. ಬಿಎಸ್‌ಎಫ್ ಭಾರತದ ಭೂ ಗಡಿಯನ್ನು ಕಾಪಾಡುತ್ತದೆ.
ಬಹುರಾಷ್ಟ್ರೀಯ ಸಂಚನ್ನು ಬೇಧಿಸುವ ಮೂಲಕ ದೇಶಕ್ಕೆ ರಕ್ಷಣೆ ಒದಗಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಗೃಹ ಸಚಿವಾಲಯ ಆಡಳಿತಾತ್ಮಕ ನಿಯಂತ್ರಣ ವ್ಯಾಪ್ತಿಯಲ್ಲಿಯೂ ಇದು ಸೇವೆ ಸಲ್ಲಿಸುತ್ತಿದೆ. ಬಿಎಸ್‌ಎಫ್ ಪಡೆಯಲ್ಲಿ ಗ್ರೂಪ್ ಎ, ಬಿ ಮತ್ತು ಸಿ ಎಂದು ಹತ್ತಾರು ವಿಭಾಗಗಳಿವೆ. ಇದರ ಮುಖ್ಯಸ್ಥರು ನಿರ್ದೇಶಕ-ಜನರಲ್ (ಡಿಜಿ) ಎಂದು ಕರೆಯಲಾಗುತ್ತದೆ. ಕಾಲಕಾಲಕ್ಕೆ ವಿವಿಧ ಕಾರ್ಯಯೋಜನೆಯೊಂದಿಗೆ ರೂಪುಗೊಳ್ಳುವ ಒಕ್ಕೂಟದ ಸಶಸ್ತ್ರ ಬಿಎಸ್‌ಎಫ್ ಪ್ರಾರಂಭದಲ್ಲಿ ಸೀಮಿತ ಬೆಟಾಲಿಯನ್‌ಗಳ ಮೂಲಕ ಕಾರ್ಯಾಚರಿಸುತ್ತಿತ್ತು. ಆದರೆ ಪ್ರಸ್ತುತ ಎರಡೂವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ವಿಂಗ್, ಮೆರೈನ್ ವಿಂಗ್, ಆರ್ಟಿಲರಿ ರೆಜಿಮೆಂಟ್ಸ್ ಮತ್ತು ಕಮಾಂಡೋ ಘಟಕಗಳು ಇದರ ವ್ಯಾಪ್ತಿಯಲ್ಲಿಯೇ ಬರುತ್ತವೆ. ಪ್ರಮುಖವಾಗಿ ಭಾರತ- ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ, ಭಾರತ- ಬಾಂಗ್ಲಾದೇಶದ ಗಡಿ, ಹಾಗೂ ವಾಸ್ತವ ನಿಯಂತ್ರಣ ರೇಖೆಯಲ್ಲಿ ಬಿಎಸ್ಎಫ್ ಸೈನಿಕರು ನಿಯೋಜನೆಗೊಂಡಿರುತ್ತಾರೆ.
ಭಾರತೀಯ ಸೇನೆ ಹಾಗೂ ನಕ್ಸಲ್ ನಿಗ್ರಹ ಕಾರ್ಯಾಚರಣೆ ಪಡೆಯಾಗಿ ಕೂಡಾ ಗಡಿ ಭದ್ರತಾ ಪಡೆ ಕಾರ್ಯ ನಿರ್ವಹಿಸುತ್ತದೆ. ಇಷ್ಟಲ್ಲ ವಿಶೇಷಗಳಿರುವ ಗಡಿ ಭದ್ರತಾ ಪಡೆಯಲ್ಲಿ ಮಹಿಳೆಯರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಾಜ್ಯದ ಯುವತಿಯರು ಸಹ ಬಿಎಸ್ಎಫ್ ಗೆ ಆಯ್ಕೆಯಾಗಿದ್ದು ಸುದ್ದಿ ಯಾಗಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಕವಿತಾ ಹವಾಜಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ರಮ್ಯಾ ಮತ್ತು ಕಡಬ ತಾಲೂಕು ಕಾಣಿಯೂರು ಗ್ರಾಮದ ಯೋಗಿತಾ ಗಡಿ ಭದ್ರಾ ಪಡೆಗೆ ಆಯ್ಕೆಯಾಗಿದ್ದಾರೆ. ನಮ್ಮ ನೆಮ್ಮದಿಯ ಹಿಂದೆ ಹಗಲಿರುಳು ಶ್ರಮಿಸುವ ಈ ಯೋಧರಿಗೆ ನಿಮ್ಮ ಮೆಚ್ಚುಗೆಯೂ ಇರಲಿ.
ಭಾರತದ ವಿಶೇಷ ಭದ್ರತಾ ಪಡೆ ಪ್ಯಾರಾ ಕಮಾಂಡೋಗಳ ತರಬೇತಿ ಎಷ್ಟು ಭಯಾನಯಕ ಅನ್ನೋದನ್ನ ನೀವು ತಿಳಿಯಲೇಬೇಕು..!
‘RAW’ ರಣಧೀರರು..!! ಮಣ್ಣಲ್ಲಿ ಮಣ್ಣಾದ್ರೂ ದೇಶದ ಸೀಕ್ರೆಟ್ ಬಿಟ್ಟುಕೊಡದ ನಿಸ್ಸೀಮರು… ‘RAW’ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ..!