ಟಿ-ಟ್ವೆಂಟಿ ವಿಶ್ವಕಪ್ ನಡೆಯದಿದ್ರೆ ಆಸೀಸ್ ವಿರುದ್ಧದ ಟಿ-ಟ್ವೆಂಟಿ ಸರಣಿಯೂ ರದ್ದು…!
ಆಸ್ಟ್ರೇಲಿಯಾದಲ್ಲಿ 2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತೋ ಇಲ್ವೋ ಗೊತ್ತಿಲ್ಲ. ಟಿ-ಟ್ವೆಂಟಿ ವಿಶ್ವಕಪ್ ನ ಭವಿಷ್ಯ ಜೂನ್ 10ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ನಿರ್ಧಾರವಾಗಲಿದೆ. ಒಂದು ವೇಳೆ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಿದ್ರೆ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ ಭಾರೀ ನಷ್ಟವಾಗಲಿದೆ. ಹಾಗಂತ ಇದು ಕೇವಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಮಾತ್ರವಲ್ಲ. ಬಿಸಿಸಿಐನಿಂದಲೂ ಕ್ರಿಕೆಟ್ ಆಸ್ಟ್ರೇಲಿಯಾದ ಬೊಕ್ಕಸಕ್ಕೆ ನಷ್ಟವಾಗಲಿದೆ.
ಯಾಕಂದ್ರೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗಿಂತ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿ ನಡೆಯಲಿದೆ. ಅಕ್ಟೋಬರ್ 11ರಂದು ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಮೊದಲ ಟಿ-ಟ್ವೆಂಟಿ ಪಂದ್ಯ ನಡೆದ್ರೆ, ಅಕ್ಟೋಬರ್ 14ರಂದು ಕ್ಯಾನ್ಬೆರಾದಲ್ಲಿ ಎರಡನೇ ಟಿ-ಟ್ವೆಂಟಿ ಪಂದ್ಯ ಹಾಗೂ ಅಕ್ಟೋಬರ್ 17ರಂದು ಅಡಿಲೇಡ್ನಲ್ಲಿ ಮೂರನೇ ಟಿ-ಟ್ವೆಂಟಿ ಪಂದ್ಯ ನಡೆಯಲಿದೆ. ಅಕ್ಟೋಬರ್ 18ರಿಂದ ಟಿ-ಟ್ವೆಂಟಿ ವಿಶ್ವಕಪ್ನ ವೇಳಾಪಟ್ಟಿ ಈ ಹಿಂದೆಯೇ ಸಿದ್ದವಾಗಿತ್ತು.
ಆದ್ರೆ ಬಿಸಿಸಿಐ ಈಗ ಕ್ರಿಕೆಟ್ ಆಸ್ಟ್ರೇಲಿಯಾಗೆ ಉಲ್ಟಾ ಹೊಡೆದಿದೆ. ಒಂದು ವೇಳೆ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಿದ್ರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-ಟ್ವೆಂಟಿ ಸರಣಿ ನಡೆಸುವುದರಲ್ಲಿ ಅರ್ಥವಿಲ್ಲ. ಇಂತಹ ಸಮಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ನಡೆಸುವುದು ಕೂಡ ದುಬಾರಿಯಾಗುತ್ತದೆ. ಹೀಗಾಗಿ ಡಿಸೆಂಬರ್ ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಸಮಯದಲ್ಲಿ ಟಿ-ಟ್ವೆಂಟಿ ಸರಣಿಯನ್ನು ನಡೆಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ಅಕ್ಟೋಬರ್ ವೇಳಾಪಟ್ಟಿಯ ಸಮಯದಲ್ಲಿ ಇನ್ನೊಂದು ದ್ವಿಪಕ್ಷೀಯ ಸರಣಿಯನ್ನು ನಡೆಸುವ ಯೋಚನೆಯೂ ಬಿಸಿಸಿಐ ಮುಂದಿದೆ. ಅಷ್ಟೇ ಅಲ್ಲ, ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡಿದ್ರೆ ಅದೇ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸುವುದು ಬಿಸಿಸಿಐನ ಪ್ಲಾನ್ ಆಗಿದೆ.








