ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿದೆ ಉತ್ತಮ ಉಪಾಯ….
ಭಾರತೀಯ ಸಂಸ್ಕೃತಿಯ ಉಳಿವಿಗೆ ಗೃಹಸ್ಥಜೀವನ ಸುಭದ್ರವಾದ ಅಡಿಪಾಯ ಒದಗಿಸುವಂಥದ್ದು. ಆದರೆ ಈಗೀಗ ಆ ಗೃಹಸ್ಥ ಜೀವನದಲ್ಲಿ ದಾಂಪತ್ಯಜೀವನದಲ್ಲಿ ಹೆಚ್ಚಾಗಿ ಬಿರುಕು ಕಾಣಿಸಿ ಕೊಳ್ಳುತ್ತಿದೆ. ಗಂಡ ಹೆಂಡತಿ ಬೇರೆ ಬೇರೆಯಾಗುತ್ತಿದ್ದಾರೆ. ಡಿವೋರ್ಸ ತೆಗೆದುಕೊಳ್ಳುತ್ತಿದ್ದಾರೆ. ತಮಗಾದ ಮಕ್ಕಳ ಮೇಲೆ, ಕುಟುಂಬಗಳ ಮೇಲೆ, ಸಮಾಜದ ಮೇಲೆ ಯಾವ ಪ್ರಭಾವ ಬೀರುತ್ತದೆ ಎನ್ನುವ ವಿಚಾರ ಯಾರಿಗೂ ಇಲ್ಲ. ಕೇವಲ ಸ್ವಾರ್ಥಕ್ಕಾಗಿ, ಕೇವಲ ತನ್ನ ಸುಖದ ಹಪಾಹಪಿಗಾಗಿ ಶಾಸ್ತ್ರಕ್ಕೆ ವಿರುದ್ಧವಾಗಿ ಹೋಗುತ್ತಿದ್ದಾನೆ.
ಡಿವೋರ್ಸ ತೆಗೆದುಕೊಳ್ಳುವ ವ್ಯಕ್ತಿ ಬೇರೆಯಾಗುವದಕ್ಕೆ ಕಾರಣಗಳನ್ನು ಕೊಟ್ಟು ಪ್ರಬಲವಾಗಿ ಪ್ರತಿಪಾದಿಸುತ್ತಾನೆ. ಅವನು(ಳು) ಹಾಗಿದ್ದಾನೆ(ಳೆ) ಹೀಗಿದ್ದಾನೆ(ಳೆ) ಇಂತಹ ದೋಷಗಳು ಇವೆ. ಹೊಂದಾಣಿಕೆಯ ಸ್ವಭಾವ ಅವನ(ಳ)ದು ಅಲ್ಲ. ಇತ್ಯಾದಿ. ನಮ್ಮ ಹಿಂದಿನ ತಲೆಮಾರಿನಲ್ಲಿ ಯಾರೂ ಪರಿಪೂರ್ಣರು ಆಗಿದ್ದಿಲ್ಲ. ಹಿಂದಕ್ಕೂ ಜಗಳವಾಗುತ್ತಿದ್ದವು. ಆದರೂ ಅನ್ಯೋನ್ಯವಾಗಿಯೇ ಇರುತ್ತಿದ್ದರು. ನಾವು ಎಷ್ಟೇ ಮದುವೆಗಳಾಗೋಣ. ಆದರೆ ಸ್ವಲ್ಪವಾದರೂ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಜೊತೆಯಾಗಿ ಇರಲು ಸಾಧ್ಯವೇ ಇಲ್ಲ. ಹೊಂದಿಕೊಳ್ಳುವ ಸ್ವಭಾವವಿಲ್ಲ ಎಂದು ಕಾರಣ ಕೊಟ್ಟು ಮೂರು ಜನರನ್ನು ಬಿಟ್ಟು, ನಾಲ್ಕನೇ ಮದುವೆಯಾಗಿ ಅವನ ಜೊತೆಗಾದರೂ ಹೊಂದಾಣಿಕೆ ಮಾಡಿಕೊಂಡೇ ಬದುಕುವದಾದರೆ ಆ ಕೆಲಸ ಮೊದಲಿಗೆ ಮದುವೆಯಾದ ಗಂಡನ ಜೊತೆಗೇ ಮಾಡಬಹುದಲ್ಲವೇ ?
ನಮ್ಮ ದೇವತೆಗಳನ್ನು ನೋಡಿ. ವಿಷ್ಣು ಲಕ್ಷ್ಮೀದೇವಿಯ ಜೊತೆಗೆ ಅನಾದಿ ಕಾಲದಿಂದ ಇದ್ದಾನೆ. ಬ್ರಹ್ಮದೇವರು ಸರಸ್ವತೀಯ ಜೊತೆಗೆ ಅನಾದಿಕಾಲದಿಂದ ಇದ್ದಾರೆ. ರುದ್ರದೇವರು ಪಾರ್ವತೀದೇವಿಯ ಜೊತೆಗೆ ಬಹು ಪ್ರೀತಿಯಿಂದ ಕೈಲಾಸದಲ್ಲಿ ಇದ್ದದ್ದು ಕೇಳುತ್ತೇವೆ. ಇಂದ್ರ ಶಚಿ, ಯಮ ಶ್ಯಾಮಲಾ, ವರುಣ ಗಂಗಾ ಮೊದಲಾದ ದೇವತೆಗಳು ಅವತಾರದಲ್ಲೂ ಪ್ರಾಯಃ ತಮ್ಮ ಸಂಗಾತಿಯನ್ನು ಬಿಡುವದಿಲ್ಲ.
ಸಂಗಾತಿಯ ಜೊತೆಗೆ ಸುಖದ ಸಹಬಾಳ್ವೆಗೆ ಸಮನ್ವಯವೇ ಸಹಕಾರಿ. ಪರಸ್ಪರ ವಿಚಾರ ಹಂಚಿಕೊಂಡು, ವಿಚಾರ ಮಾಡಿ ಅಹಂಕಾರವನ್ನು ತೊರೆದು ನಿರ್ಣಯ ಕೈಗೊಳ್ಳುತ್ತ ಹೋದರೆ ಯಾವ ವಿರೋಧವೂ ಇರುವದಿಲ್ಲ. ಮನೆ ಮಕ್ಕಳ ಪಾಲನೆ ವಿಚಾರದಲ್ಲಿ ಹೆಂಡತಿಯ ನಿರ್ಣಯ, ಲೌಕಿಕ ವ್ಯವಹಾರದಲ್ಲಿ ಗಂಡನ ನಿರ್ಣಯ ಹೀಗೆ ಯಾವುದರಲ್ಲಿ ಯಾರಿಗೆ ನೈಪುಣ್ಯವಿದೆಯೋ ಅವರಿಗೆ ಆಗ ಪ್ರಾಮುಖ್ಯತೆ ಕೊಡುತ್ತಿದ್ದರೆ ಪ್ರಾಯ ಜಗಳ ಉದ್ಭವಿಸುವದಿಲ್ಲ. ವಿರಸವಾಗುವದಿಲ್ಲ. ಎಲ್ಲದರಲ್ಲಿ ಸರಸವೇ ಇರುತ್ತದೆ. ಶ್ರೀಮದಾಚಾರ್ಯರು ನಮ್ಮ ದಾಂಪತ್ಯಜೀವನದಲ್ಲಿ ಬಿರುಕು ಬಂದಾಗ ಉಮಾಹರ ಚಿಂತನೆಯನ್ನು ಹೇಳಿದ್ದಾರೆ. ಮದುವೆ ಮಾಡುಕೊಳ್ಳುವ ಕನ್ಯೆ ಪಾರ್ವತಿಸಹಿತರಾದ ರುದ್ರದೇವರ ಪೂಜೆಯನ್ನು ಮಾಡಿಯೇ ಅಕ್ಷತೆಯ ಮಂಟಪಕ್ಕೆ ಬರುತ್ತಾಳೆ
ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತಃ । ತದೇತನ್ಮಿಥುನಂ ಜ್ಞಾತ್ವಾ ನ ದಾಂಪತ್ಯಾದ್ವಿಹೀಯತೆ ॥
ನಮ್ಮ ದಾಂಪತ್ಯದಲ್ಲಿ ಗೊಂದಲವಾದಾಗ ಮೊದಲು ಪಾರ್ವತಿ ದೇವಿ ಸಹಿತ ರುದ್ರದೇವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೃತರೂಪದಲ್ಲಿ ಕೆಲವು ದಿನ ಪೂಜೆ, ಪ್ರದಕ್ಷಿಣೆ, ನಮಸ್ಕಾರ ಮಾಡಿ ಅನುಗ್ರಹ ಪಡೆದರೆ, ನಿಶ್ಚಿತವಾಗಿ ಸಂಸಾರ ಸುಭದ್ರವಾಗಿರಲು ಬೇಕಾದ ಸೌಭಾಗ್ಯ ಪಾರ್ವತಿ ದೇವಿ ಮನೋಭಿಮಾನಿಗಳಾದ ಮಂಗಲಮಯ ರುದ್ರದೇವರು ತೋರಿಸಿಕೊಡುತ್ತಾರೆ. ಸಂಯಮದಿಂದ ಇದ್ದರೆ ನಮ್ಮ ದಾಂಪತ್ಯ ಇತರರಿಗೂ ದಾರಿದೀಪವಾಗುದರಲ್ಲಿ ಸಂಶಯವೇ ಇಲ್ಲ.
Indian culture: The best idea in Indian culture is to keep marriage strong.