ಯುಎಇಯಲ್ಲಿರುವ ಭಾರತೀಯ ವಲಸಿಗರ ಪಾಸ್-ಪೋರ್ಟ್ ಇನ್ನು ಎರಡೇ ದಿನಗಳಲ್ಲಿ ನವೀಕರಣ
ದುಬೈ, ಅಗಸ್ಟ್ 2: ಯುಎಇಯಲ್ಲಿರುವ ಭಾರತೀಯ ವಲಸಿಗರು ತಮ್ಮ ಪಾಸ್‌ಪೋರ್ಟ್‌ಗಳನ್ನು ಇನ್ನು ಕೇವಲ ಎರಡು ದಿನಗಳಲ್ಲಿ ನವೀಕರಿಸಬಹುದು. ಆಗಸ್ಟ್‌ನಿಂದ ಹೊಸ ಕಾರ್ಯಾಚರಣಾ ವಿಧಾನ ಜಾರಿಗೆ ಬರಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದಲ್ಲದೆ, ದುಬೈನಲ್ಲಿರುವ ಭಾರತೀಯ ದೂತಾವಾಸವು ಯುಎಇಯಾದ್ಯಂತ ವಾಸಿಸುವ ವಲಸಿಗರಿಂದ ಪಾಸ್ ಪೋರ್ಟ್ ಅರ್ಜಿಗಳನ್ನು ಸ್ವೀಕರಿಸಬಹುದು ಎಂದು ವರದಿ ಹೇಳಿದೆ. ಈ ಮೊದಲು, ಪ್ರತಿ ಎಮಿರೇಟ್ ಪರಿಶೀಲನೆಗಾಗಿ ಅದರ ಪ್ರತ್ಯೇಕ ಕೇಂದ್ರವನ್ನು ಹೊಂದಿತ್ತು.
ಪಾಸ್ ಪೋರ್ಟ್ ನವೀಕರಣ ಫಾರ್ಮ್ ಗಳನ್ನು ಸ್ವೀಕರಿಸಿದ ದಿನವೇ ಪ್ರಕ್ರಿಯೆಗೊಳಿಸಲಾಗುವುದು ಎಂದು ದುಬೈನ ಕಾನ್ಸುಲ್ ಜನರಲ್ ಡಾ.ಅಮನ್ ಪುರಿ ತಿಳಿಸಿದ್ದಾರೆ. ಕೆಲವು ಅಪ್ಲಿಕೇಶನ್ ಗಳು ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಪುರಿ ಹೇಳಿದ್ದಾರೆ. ಪೊಲೀಸ್ ಪರಿಶೀಲನೆ ಅಥವಾ ಭಾರತದಿಂದ ಯಾವುದೇ ಅನುಮತಿ ಪಡೆಯುವಂತಹ ವಿಶೇಷ ಅನುಮೋದನೆಗಳ ಅಗತ್ಯವಿದ್ದರೆ ಸರಾಸರಿ ಎರಡು ವಾರಗಳಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ವಿವರಿಸಿದರು. ಕಳೆದ ವರ್ಷ, ಇಲ್ಲಿರುವ ಭಾರತೀಯ ಮಿಷನ್ 2 ಲಕ್ಷಕ್ಕೂ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ನೀಡಿತು.