ಬೆಂಗಳೂರು: ಚೀನಾ (China) ಮೂಲದ ವ್ಯಕ್ತಿಗಳ ಕೈವಾಡದಿಂದ ಆನ್ ಲೈನ್ ಮೂಲಕ ವಂಚಿಸುತ್ತಿದ್ದ 122 ಪ್ರಕರಣಗಲು ಬೆಳಕಿಗೆ ಬಂದಿದ್ದು, 10 ಜನರನ್ನು ಅರೆಸ್ಟ್ ಮಾಡಲಾಗಿದೆ.
ಆರೋಪಿಗಳು ಚೀನಾ ವ್ಯಕ್ತಿಗಳು ಸೂಚಿಸಿದಂತೆ ಆನ್ ಲೈನ್ ಮೂಲಕ ವಂಚಿಸಿದ್ದಾರೆ. ಹೀಗಾಗಿ 10 ಜನ ಆರೋಪಿಗಳನ್ನು ಬೆಂಗಳೂರು (Bengaluru) ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ, ಸೈಯದ್ ಝೈದ್, ಸಾಹಿ ಅಬ್ದುಲ್ ಅನನ್ ಹಾಗೂ ಓಂಪ್ರಕಾಶ್ ಬಂಧಿತರು. ಬಂಧಿತ ಆರೋಪಿಗಳ ವಿರುದ್ಧ ಬೇರೆ ಬೇರೆ ರಾಜ್ಯಗಳಲ್ಲಿ ವಂಚಿಸಿದ್ದ ಪ್ರಕರಣ ದಾಖಲಾಗಿವೆ. ವಂಚಿಸಿದ್ದ ಆರೋಪದಡಿ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ನಲ್ಲಿ ಒಟ್ಟು 122 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು, ಮನೆಯಲ್ಲಿಯೇ ಕುಳಿತು ನಾವು ನೀಡುವ ಟಾಸ್ಕ್ ಗಳನ್ನು ಆನ್ ಲೈನ್ ನಲ್ಲಿ ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ನಂಬಿಸುತ್ತಿದ್ದರು. ನಂತರ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ, ಆರಂಭದಲ್ಲಿ ನಾವು ಹೇಳುವ ಕೆಲ ಐಷಾರಾಮಿ ಹೋಟೆಲ್ ಗಳಿಗೆ ರಿವ್ಯೂಗಳನ್ನು ನೀಡಬೇಕು. ಮತ್ತು ಈ ರೀವ್ಯೂಗಳನ್ನು ನೀಡುವ ಸಮಯದಲ್ಲಿ ನೀವು 150-200 ರೂ. ಪಾವತಿಸಿ ರಿವ್ಯೂ ರಿಪೋರ್ಟ್ ನೀಡಿದರೆ ಲಾಭಾಂಶ ನೀಡುತ್ತೇವೆ ಎನ್ನುತ್ತಿದ್ದರು.
ಇದನ್ನು ನಂಬಿದವರು ಆನ್‌ಲೈನ್ ಮೂಲಕ ಪಾವತಿಸುತ್ತಿದ್ದರು. ಈ ರೀತಿ ಹಲವು ರಿವ್ಯೂ ರಿಪೋರ್ಟ್‌ಗಳನ್ನ ತರಿಸಿಕೊಂಡು ಹಣ ಪಾವತಿಸಿ ನಂಬಿಕೆ ಗಳಿಸಿಕೊಂಡ ನಂತರ ಕ್ರಿಪ್ಟೋ ಕರೆನ್ಸಿ (Cryptocurrency) ಟ್ರೇಡಿಂಗ್‌ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದರು. ಈ ರೀತಿ ವ್ಯಕ್ತಿಯೊಬ್ಬರಿಗೆ 25.37 ಲಕ್ಷ ರೂ. ವಂಚಿಸಿದ್ದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
7 ಜನ ಆರೋಪಿಗಳನ್ನ ಆರ್.ಟಿ.ನಗರದ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಗಳ ಪೈಕಿ ಇನ್ನೂ ಮೂವರು ಚೀನಾಗೆ ತೆರಳಿರುವುದು ಹಾಗೂ ಚೀನಾ ಮೂಲದ ವ್ಯಕ್ತಿಗಳ ಸೂಚನೆಯಂತೆ ವಂಚನೆಯಲ್ಲಿ ತೊಡಗಿರುವುದನ್ನು ಹೇಳಿದ್ದರು. ಅದರಂತೆ ಸೆ. 15ರಂದು ಚೀನಾದಿಂದ ಬಂದಿಳಿದ ಮೂವರೂ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಒಟ್ಟು 10 ಜನರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.








