ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್, ತಮ್ಮ ಸಮಯಪ್ರಜ್ಞೆಯಿಂದ ವೃದ್ಧೆಯೊಬ್ಬರು ಮೋಸಕ್ಕೆ ಒಳಗಾಗುವುದನ್ನು ತಪ್ಪಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೋಸ್ ವಿಲ್ಲೆ ಕ್ಯಾಬ್ ನ ಚಾಲಕ ರಾಜ್ ಸಿಂಗ್ ಎಂಬಾತ ಈ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ವ್ಯಕ್ತಿ ಉತ್ತಮ ನಾಗರೀಕ ಪ್ರಶಸ್ತಿಗೆ ಅರ್ಹ ಎಂದು ಸ್ವತಃ ಪೊಲೀಸ್ ಇಲಾಖೆಯೇ ಹಾಡಿ ಹೊಗಳಿದೆ.
ಅಸಲಿಗೆ ಆಗಿದ್ದೇನು? ರಾಜ್ ಸಿಂಗ್ ಸಮಯಪ್ರಜ್ಞೆ ಮೆರೆದದ್ದು ಹೇಗೆ..?
ಸನ್ ಸಿಟಿಯಲ್ಲಿರುವ 92 ವರ್ಷದ ವೃದ್ಧೆಯೊಬ್ಬರು, ರಾಜ್ ಸಿಂಗ್ ಅವರ ಕ್ಯಾಬ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಅವರೊಂದಿಗೆ ರಾಜ್ ಸಿಂಗ್ ಮಾತುಕತೆಗೆ ಇಳಿಯುತ್ತಾರೆ. ಆಗ ಬ್ಯಾಂಕ್ ಗೆ ಹೋಗುವ ಬಗ್ಗೆ ವೃದ್ಧೆ, ರಾಜ್ ಸಿಂಗ್ ಅವರಿಗೆ ಹೇಳಿದ್ದಾರೆ. ನನ್ನ ಅಕೌಂಟ್ಗೆ 25 ಸಾವಿರ ಡಾಲರ್(17,85,000 ರೂಪಾಯಿ) ಹಣ ಬಂದಿದೆ. ಸಾಲವನ್ನ ತೀರಿಸಲು ಬ್ಯಾಂಕ್ ನಿಂದ ಈ ಹಣ ವಿತ್ ಡ್ರಾ ಮಾಡಲು ಹೊರಟಿದ್ದೇನೆ ಎಂದು ತಿಳಿಸುತ್ತಾರೆ. ಆಗ ಅನುಮಾನಗೊಂಡ ರಾಜ್ ಸಿಂಗ್, ತಕ್ಷಣ ಇದರಲ್ಲೇನೋ ಮೋಸ ಇದೆ ಎಂದು ವೃದ್ಧೆಗೆ ಹೇಳಿದ್ದಾರೆ. ಆದ್ರೆ ವೃದ್ಧೆ, ರಾಜ್ ಸಿಂಗ್ ಅವರ ಮಾತುಗಳನ್ನು ನಂಬುವುದಿಲ್ಲ. ಇದನ್ನ ತಿಳಿಸಿ ಹೇಳಲು ರಾಜ್ ಸಿಂಗ್ ಸಾಕಷ್ಟು ಪ್ರಯತ್ನಪಡ್ತಾರೆ. ಕೊನೆಗೆ ಅವರ ಒಪ್ಪಿಗೆ ಪಡೆದು, ಪೊಲೀಸರ ಬಳಿ ಸಲಹೆ ಪಡೆಯಲು, ಕ್ಯಾಬನ್ನು ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಬರ್ತಾರೆ. ಆಗ ಪೊಲೀಸ್ ಠಾಣೆಯಲ್ಲಿ ಇದು ಮೋಸ ಮಾಡುವ ವಿಧಾನ ಅನ್ನೋದು ಗೊತ್ತಾಗುತ್ತೆ. ನಂತರ ಅರ್ಥೈಸಿಕೊಂಡ ವೃದ್ಧೆಯನ್ನ ರಾಜ್ ಸಿಂಗ್ ಮರಳಿ ಮನೆಗೆ ಬಿಡ್ತಾರೆ.
ಕೇವಲ ತನ್ನ ಚಾಲಕ ಪ್ರವೃತ್ತಿಯನ್ನು ಮಾತ್ರ ಮಾಡದೇ ತಮ್ಮ ಗ್ರಾಹಕ ಮೋಸ ಹೋಗೋದನ್ನೂ ತಪ್ಪಿಸಿದ ರಾಜ್ ಸಿಂಗ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ 50 ಡಾಲರ್( 3,569 ರೂಪಾಯಿ) ಬಹುಮಾನವನ್ನೂ ಪೊಲೀಸ್ ಇಲಾಖೆ ಘೋಷಿಸಿದೆ.








