ಮಹಿಳಾ ಏಷ್ಯಾಕಪ್ 9ನೇ ಆವೃತ್ತಿಯ ಫೈನಲ್ ಗೆ ಭಾರತೀಯ ಮಹಿಳಾ ತಂಡ ಪ್ರವೇಶಿಸಿದೆ. ಈ ಮೂಲಕ ಭಾರತ ತಂಡ ಸತತ 9ನೇ ಬಾರಿ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಬರೋಬ್ಬರಿ 10 ವಿಕೆಟ್ ಗಳಿಂದ ಸೋಲಿಸಿ ಭಾರತ ಮಹಿಳಾ ಕ್ರಿಕೆಟ್ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ ಕೇವಲ 80 ರನ್ ಗಳನ್ನು ಗಳಿಸಿತ್ತು.
81 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡ, ಸ್ಪೋಟಕ ಆರಂಭ ಪಡೆಯಿತು. ಭಾರತದ ಆರಂಭಿಕ ಜೋಡಿಯಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಜೋಡಿ 11 ಓವರ್ ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಮೃತಿ ಮಂಧನಾ 39 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 55 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದೆಡೆ ಶಫಾಲಿ ವರ್ಮಾ ಅಜೇಯ 26 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ರೇಣುಕಾ ಸಿಂಗ್ ಹಾಗೂ ರಾಧಾ ಯಾದವ್ ದಾಳಿಗೆ ತತ್ತರಿಸಿ ಹೋಯಿತು. ಅಗ್ರಕ್ರಮಾಂಕದ ಮೂವರು ಬ್ಯಾಟರ್ ಗಳನ್ನು ರೇಣುಕಾ ಸಿಂಗ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶ ಪರ ನಾಯಕಿ ನಿಗಾರ್ ಸುಲ್ತಾನಾ(32) ಹಾಗು ಶೋರ್ನಾ ಅಖ್ತರ್(19) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್ ಗಳು ಎರಡಂಕಿ ದಾಟಲಿಲ್ಲ.
ಭಾರತದ ಪರ ರೇಣುಕಾ ಸಿಂಗ್, ರಾಧಾ ಯಾದವ್ ತಲಾ 3 ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವು 9ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಸತತ 9ನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಿತು. 2018ರ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು ಮುಗ್ಗರಿಸಿದ್ದು ಬಿಟ್ಟರೆ, ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡವು ಫೈನಲ್ ನಲ್ಲಿ ಸೋತಿಲ್ಲ. ಈಗಾಗಲೇ 7 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡ 8ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಪೈನಲ್ ಪಂದ್ಯವು ಜುಲೈ 28ರಂದು ನಡೆಯಲಿದ್ದು, ಪಾಕಿಸ್ತಾನ ಇಲ್ಲವೇ ಶ್ರೀಲಂಕಾ ಎದುರು ಸೆಣಸಾಟ ನಡೆಸಲಿದೆ.








