ರಾಜ್ಕೋಟ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಸರಣಿಯ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 5 ವಿಕೆಟ್ ಗೆ 326 ರನ್ ಗಳಿಸಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭರ್ಜರಿ ಮೊತ್ತ ಗಳಿಸಿದೆ. ರೋಹಿತ್ ಶರ್ಮಾ 131 ರನ್, ಆಲ್ರೌಂಡರ್ ರವೀಂದ್ರ ಜಡೇಜಾ ಅಜೇಯ 110 ರನ್ ಗಳಿಸಿದರೆ, ಮೊದಲ ಪಂದ್ಯದಲ್ಲಿಯೇ ಸರ್ಫರಾಜ್ ಖಾನ್ 62 ರನ್ ಗಳಿಸಿ ಗಮನ ಸೆಳೆದಿದ್ದಾರೆ.
ಕಳೆದ ಬಾರಿಯ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 131 ರನ್ ಗಳಿಸಿ ಔಟಾಗಿದ್ದಾರೆ. ಉಳಿದಂತೆ ಶುಭಮನ್ ಗಿಲ್ ಶೂನ್ಯಕ್ಕೆ ಹಾಗೂ ರಜತ್ ಪಾಟೀದಾರ್ 5 ರನ್ ಗಳಿಸಿ ಕ್ಯಾಚ್ ನೀಡಿ ಔಟಾದರು. ಸರ್ಫರಾಜ್ ಖಾನ್ ಅರ್ಧಶತಕ ಗಳಿಸಿ ರನೌಟ್ ಆದರು. ರವೀಂದ್ರ ಜಡೇಜಾ 110 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಟಾಮ್ ಹಾರ್ಟ್ಲಿ 1 ವಿಕೆಟ್ ಪಡೆದಿದ್ದಾರೆ.